ದೆಹಲಿ ಮೇ 11: ಅಬಕಾರಿ ನೀತಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಜೂನ್ 1 ರವರೆಗೆ ಮಧ್ಯಂತರ ಜಾಮೀನು ನೀಡಿ ತಿಹಾರ್ ಜೈಲಿನಿಂದ ಹೊರಬಂದ ನಂತರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶನಿವಾರ ತಮ್ಮ ಮೊದಲ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಆಮ್ ಆದ್ಮಿ ಪಕ್ಷದ ಕೇಂದ್ರ ಕಚೇರಿಯಲ್ಲಿ ತಮ್ಮ ಬೆಂಬಲಿಗರಿಗೆ ಫ್ಲೈಯಿಂಗ್ ಕಿಸ್ ನೀಡಿದ ಸಿಎಂ ಕೇಜ್ರಿವಾಲ್, “ನಿಮ್ಮೆಲ್ಲರ ನಡುವೆ ಮರಳಿ ಬಂದಿದ್ದು ನನಗೆ ತುಂಬಾ ಸಂತೋಷವಾಗಿದೆ. ನಾವು ಒಟ್ಟಾಗಿ ನಮ್ಮ ದೇಶವನ್ನು ಸರ್ವಾಧಿಕಾರದಿಂದ ರಕ್ಷಿಸಬೇಕು, ನಾನು ನನ್ನ ಎಲ್ಲಾ ಶಕ್ತಿಯಿಂದ ಹೋರಾಡುತ್ತೇನೆ, ನನಗೆ ದೇಶದ 140 ಕೋಟಿ ಜನರ ಬೆಂಬಲ ಬೇಕು ಎಂದು ಹೇಳಿದ್ದಾರೆ.
“ಅವರು (ಬಿಜೆಪಿ) ನನ್ನನ್ನು ಜೈಲಿಗೆ ಕಳುಹಿಸಿದ್ದಾರೆ. ಅವರು ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದಾರೆಂದು ಪ್ರಧಾನಿ ಹೇಳುತ್ತಾರೆ. ಆದರೆ ಬಿಜೆಪಿ ತಮ್ಮ ಪಕ್ಷದಲ್ಲಿರುವ ಎಲ್ಲಾ ಭ್ರಷ್ಟರನ್ನು ಸ್ವಾಗತಿಸಿದ್ದಾರೆ. ನೀವು ಭ್ರಷ್ಟಾಚಾರದ ವಿರುದ್ಧ ಹೋರಾಡಲು ಬಯಸಿದರೆ, ಅರವಿಂದ್ ಕೇಜ್ರಿವಾಲ್ ಅವರಿಂದ ಕಲಿಯಿರಿ” ಎಂದಿದ್ದಾರೆ ಎಎಪಿ ನಾಯಕ.
“ಮೋದಿ ಜಿ ಅವರಿಗೆ ಅತ್ಯಂತ ಅಪಾಯಕಾರಿ ಮಿಷನ್ ಇದೆ. ಅದೇನೆಂದರೆ ‘ಒಂದು ರಾಷ್ಟ್ರ ಒಂದು ನಾಯಕ’. ಅವರು ಎಲ್ಲಾ ವಿರೋಧ ಪಕ್ಷದ ನಾಯಕರನ್ನು ಜೈಲಿಗೆ ಕಳುಹಿಸುತ್ತಾರೆ. ಎಲ್ಲಾ ಬಿಜೆಪಿ ನಾಯಕರನ್ನು ನಿರ್ವಹಿಸುತ್ತಾರೆ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಜ್ರಿವಾಲ್ ಹೇಳಿದ್ದಾರೆ.