ಹುಬ್ಬಳ್ಳಿ, ಸೆಪ್ಟೆಂಬರ್ 19: ಕೆಲವು ಮಂದಿ ಕಮ್ಯೂನಿಸ್ಟ್ ಮೈಂಡ್ಸೆಟ್ನ ಸ್ವಾಮೀಜಿಗಳು ಹಿಂದೂ ಧರ್ಮದಿಂದ ಲಿಂಗಾಯತರ ದೂರ ಮಾಡಲು ಸಂಚು ಹೂಡಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದರು. ಹುಬ್ಬಳ್ಳಿಯ ವೀರಶೈವ ಲಿಂಗಾಯತ ಏಕತಾ ಸಮಾವೇಶದ ಬಗ್ಗೆ ಪ್ರತಿಕ್ರಿಯಿಸಿದ ಅವರು, ವೀರಶೈವ ಮತ್ತು ಲಿಂಗಾಯತ ಸಮುದಾಯಗಳ ನಡುವಿನ ಸಾಮ್ಯತೆಗಳನ್ನು ಒತ್ತಿ ಹೇಳಿದರು. ದುರದೃಷ್ಟವಶಾತ್, ಕೆಲವು ಸ್ವಾಮೀಜಿಗಳು ತಮ್ಮ ಸ್ವಾರ್ಥಕ್ಕಾಗಿ ವೀರಶೈವ ಮತ್ತು ಲಿಂಗಾಯತ ಸಮುದಾಯಗಳ ನಡುವೆ ಕಂದಕವನ್ನು ನಿರ್ಮಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಯತ್ನಾಳ್ ಆರೋಪಿಸಿದರು. ಈ ಸ್ವಾಮೀಜಿಗಳು ಲಿಂಗಾಯತ ಧರ್ಮ ಅಥವಾ ಶೈವರ ಉದ್ಧಾರದಲ್ಲಿ ಆಸಕ್ತಿ ಹೊಂದಿಲ್ಲ. ಬದಲಾಗಿ, ಅವರು ಇಡೀ ವೀರಶೈವ-ಲಿಂಗಾಯತ ಸಮುದಾಯವನ್ನು ಸನಾತನ ಹಿಂದೂ ಧರ್ಮದಿಂದ ದೂರ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಯತ್ನಾಳ್ ಆರೋಪಿಸಿದರು.
ಹಿಂದೂ ಧರ್ಮದ ಪದ್ಧತಿಗಳು ಮತ್ತು ಆಚರಣೆಗಳನ್ನು ಅವಮಾನಿಸುವುದೇ ಕೆಲವು ಮಠಾಧೀಶರ ಉದ್ಯೋಗವಾಗಿದೆ. ಬಸವಣ್ಣನವರ ತತ್ವಗಳನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವುದು ಅವರಿಗೆ ಚಾಳಿಯಾಗಿಬಿಟ್ಟಿದೆ ಎಂದು ಯತ್ನಾಳ್ ಟೀಕಿಸಿದರು. ಅಲ್ಲದೇ, ಹಿಂದೂ ಧರ್ಮದ ಆಚರಣೆಗಳನ್ನು ಅಪಮಾನಿಸುವ ನೀವು, ಬಸವಣ್ಣನ ತತ್ವ ಅನುಸರಿವು ನೀವು ಪಾದ ಪೂಜೆ ಯಾಕೆ ಮಾಡಿಸಿಕೊಳ್ಳುತ್ತೀರಿ ಎಂದು ಪ್ರಶ್ನಿಸಿದರು. ಲಿಂಗಾಯತ ಮತ್ತು ವೀರಶೈವ ಧರ್ಮಗಳು ಇನ್ನೂ ಭಾರತ ಸರ್ಕಾರದಿಂದ ಅಧಿಕೃತ ಮಾನ್ಯತೆಯನ್ನು ಪಡೆದಿಲ್ಲ ಎಂಬುದನ್ನೂ ಅವರು ಸ್ಪಷ್ಟಪಡಿಸಿದರು.