ವಕ್ಫ್ ಆಸ್ತಿ ನೊಂದಣಿ ವಿಚಾರದಲ್ಲಿ ಮುಸ್ಲಿಂ ಓಲೈಕೆ ಎಂಬ ಟೀಕೆಗೆ ಗುರಿಯಾಗಿದ್ದ ಸರ್ಕಾರಕ್ಕೆ ಉಪ ಚುನಾವಣೆ ವೇಳೆ ಭಾರೀ ಪ್ರತಿರೋಧ ವ್ಯಕ್ತವಾಗಿತ್ತು. ಸರ್ಕಾರದ ಕಾಮಗಾರಿಗಳಲ್ಲಿ ಮುಸ್ಲಿಂ ಸಮುದಾಯಕ್ಕೆ ಶೇ 4 ಮೀಸಲಾತಿ ನೀಡುವ ವಿಚಾರದಲ್ಲೂ ಓಲೈಕೆ ಎಂಬ ಟೀಕೆಗೆ ಗುರಿಯಾಗಿತ್ತು ರಾಜ್ಯ ಸರ್ಕಾರ. ಇದೆಲ್ಲದರ ಜೊತೆಗೆ ಅಲ್ಪಸಂಖ್ಯಾತ ಸಮುದಾಯದ ನಾಯಕ ಜಮೀರ್ ಅಹಮದ್ ಖಾನ್ ಒಕ್ಕಲಿಗ ನಾಯಕರ ಬಗ್ಗೆ ಆಡಿದ ಮಾತು ಚುನಾವಣೆ ಮೇಲೆ ನೇರ ಪರಿಣಾಮ ಬೀರಿದೆ.
ಹೀಗೆ ವಿಪಕ್ಷಗಳ ಟೀಕೆಯಿಂದಾಗಿ ಕ್ಯಾಬಿನೆಟ್ನಲ್ಲೂ ಕೆಲವು ವಿಷಯಗಳ ನಿರ್ಧಾರ ಕೈಗೊಳ್ಳುವುದನ್ನು ರಾಜ್ಯ ಸರ್ಕಾರ ಮುಂದೂಡಿದೆ. ಅಲ್ಪಸಂಖ್ಯಾತ ಇಲಾಖೆಯ ವಿಷಯಗಳ ಮೇಲೆ ನಿರ್ಧಾರ ಕೈಗೊಳ್ಳುವುದಕ್ಕೆ ಕ್ಯಾಬಿನೆಟ್ ಹಿಂದೇಟು ಹಾಕಿದೆ. ಗುರುವಾರ ನಡೆದ ಕ್ಯಾಬಿನೆಟ್ ಮೀಟಿಂಗ್ನಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸಂಬಂಧಿಸಿದ ಮೂರು ವಿಷಯಗಳ ಪ್ರಸ್ತಾವನೆ ಇತ್ತು. ಅವುಗಳನ್ನು ಮುಂದೂಡಿದ ಸಂಪುಟ, ಅಲ್ಪಸಂಖ್ಯಾತ ಸಮುದಾಯ ವಿಷಯಗಳ ಯಾವುದೇ ನಿರ್ಣಯ ಕೈಗೊಳ್ಳದೇ ಮುಂದೂಡಿಕೆ ಮಾಡಿದೆ. ಮುಸ್ಲಿಂ ಓಲೈಕೆ ಎಂಬ ಟೀಕೆಗೆ ಗುರಿಯಾಗಿರುವ ಸರ್ಕಾರ ಎಚ್ಚರಿಕೆ ಹೆಜ್ಜೆ ಇಟ್ಟಿದೆ.
- ಕರ್ನಾಟಕ ಶಿಕ್ಷಣ ಸಂಸ್ಥೆಗಳು (ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಿಗೆ ಮಾನ್ಯತೆ ನೀಡಲು ನಿಬಂಧನೆ ಮತ್ತು ಷರತ್ತುಗಳು) (ಕಾಲೇಜು ಶಿಕ್ಷಣ) (ತಿದ್ದುಪಡಿ) ನಿಯಮಗಳು, 2024ಕ್ಕೆ ಅನುಮೋದನೆ ನೀಡುವುದು.
- ಕರ್ನಾಟಕ ಶಿಕ್ಷಣ ಸಂಸ್ಥೆಗಳು (ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಿಗೆ ಮಾನ್ಯತೆ ನೀಡಲು ನಿಬಂಧನೆ ಮತ್ತು ಷರತ್ತುಗಳು) (ತಾಂತ್ರಿಕ ಶಿಕ್ಷಣ) (ತಿದ್ದುಪಡಿ) ನಿಯಮಗಳು, 2024″ಕ್ಕೆ ಅನುಮೋದನೆ ನೀಡುವುದು.
- ರಾಜ್ಯದಲ್ಲಿ ಅಲ್ಪಸಂಖ್ಯಾತ ಶೈಕ್ಷಣಿಕ ಸಂಸ್ಥೆಗಳೆಂದು ಘೋಷಿಸಲು ಇರುವ ನಿಯಮ / ಆದೇಶಗಳನ್ನು ಪರಿಷ್ಕರಿಸುವ ಬಗ್ಗೆ.
ಈ ಮೂರು ವಿಚಾರಗಳ ಮೇಲೆ ಯಾವುದೇ ನಿರ್ಣಯ ಕೈಗೊಳ್ಳದೆ ಸಚಿವ ಸಂಪುಟ ಇವುಗಳನ್ನು ಮುಂದೂಡಿಕೆ ಮಾಡಿದೆ. ಅಲ್ಪಸಂಖ್ಯಾತ ಸಮುದಾಯಕ್ಕೆ ಕಾಮಗಾರಿಗಳಲ್ಲಿ ಮೀಸಲಾತಿ ನೀಡುವ ವಿಚಾರಕ್ಕೆ ಸರ್ಕಾರ ಯಾವುದೇ ಮುಜುಗರವಿಲ್ಲದೇ ಎದೆ ತಟ್ಟಿ ಸತ್ಯ ಹೇಳಬೇಕಿತ್ತು. ಆದರೆ ಮುಸ್ಲಿಂ ಮೀಸಲಾತಿಯನ್ನೂ ಕೂಡ ಎಲ್ಲೋ ಒಂದು ಕಡೆ ಅಳುಕಿನಿಂದಲೇ ಅಲ್ಲಗಳೆದ ಕಾಂಗ್ರೆಸ್, ಬಹುಸಂಖ್ಯಾತರ ಸಿಟ್ಟಿಗೆ ಗುರಿಯಾಗುವ ಆತಂಕದಲ್ಲಿದೆ.