ಬೆಂಗಳೂರು01: ಮೇ.9 ರಿಂದ ಹಜ್ ಯಾತ್ರೆ ಪ್ರಾರಂಭವಾಗಲಿದ್ದು, ಬೆಂಗಳೂರಿನಿಂದ ತೆರಳುವ ಮೊದಲ ವಿಮಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ದೇಶದಾದ್ಯಂತ ಲೋಕಸಭಾ ಚುನಾವಣೆ ಮತದಾನ ಪ್ರಕ್ರಿಯೆ ಮುಂದುವರೆದಿದ್ದು, ರಾಜ್ಯದಲ್ಲಿ ಉಳಿದ 14 ಕ್ಷೇತ್ರಗಳ ಮತದಾನ ಪ್ರಕ್ರಿಯೆ ಮೇ.7 ರಂದು ನಡೆಯಲಿದೆ. ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅಂದರೆ ಮೇ.8 ರಂದು ಕಾರ್ಯಕ್ರಮ ಆಯೋಜಿಸಲು ಕರ್ನಾಟಕ ಹಜ್ ಸಮಿತಿ ಚಿಂತನೆ ನಡೆಸಿದೆ.
ಆದರೆ, ಇದಕ್ಕೆ ನೀತಿ ಸಂಹಿತೆ ಅಡ್ಡಿಯಾಗುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾಹ್ ಹಾಗೂ ಇಬ್ಬರು ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸಲು ಅನುಮತಿ ನೀಡಬೇಕೆಂದು ಸಮಿತಿಯು ಈಗಾಗಲೇ ಭಾರತ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.
ಹಜ್ ಸಮಿತಿಯ ಕಾರ್ಯನಿರ್ವಾಹಕ ಅಧಿಕಾರಿ ಸರ್ಫರಾಜ್ ಖಾನ್ ಅವರು ಮಾತನಾಡಿ, ಕಾರ್ಯಕ್ರಮವನ್ನು ಆಯೋಜಿಸಲು ಅನುಮತಿ ಕೋರಿ ಸಮಿತಿಯು ಈಗಾಗಲೇ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ ಎಂದು ಹೇಳಿದ್ದಾರೆ.
2024ಕ್ಕೆ ಸಮಿತಿಯು 13,500 ಅರ್ಜಿಗಳನ್ನು ಸ್ವೀಕರಿಸಿದ್ದು, ಅದರಲ್ಲಿ 10,500 ಅರ್ಜಿದಾರರನ್ನು ಕರ್ನಾಟಕದ ಮೀಸಲಾತಿ ಅಡಿಯಲ್ಲಿ ಕಳುಹಿಸಲಾಗುವುದು. 200-300 ಯಾತ್ರಾರ್ಥಿಗಳೊಂದಿಗೆ ಎರಡು ಅಥವಾ ಮೂರು ವಿಮಾನಗಳು ಮೇ 25 ರವರೆಗೆ ಬೆಂಗಳೂರು, ಹೈದರಾಬಾದ್ ಮತ್ತು ಗೋವಾ ಪ್ರಯಾಣ ಬೆಳೆಸಲಿವೆ ಎಂದು ತಿಳಿಸಿದ್ದಾರೆ.