ಹೈದರಾಬಾದ್ ಏಪ್ರಿಲ್ 17: ಮುತ್ತಿನ ನಗರಿ ಇದೀಗ ಸೂರ್ಯನ ಪ್ರತಾಪಕ್ಕೆ ನಲುಗುತ್ತಿದ್ದು, ಅಗ್ನಿ ಕುಂಡವಾಗಿ ಮಾರ್ಪಟ್ಟಿದೆ. ಮಂಗಳವಾರ ತೆಲಂಗಾಣ ರಾಜ್ಯದ ಒಂಭತ್ತು ಜಿಲ್ಲೆಗಳಲ್ಲಿ ಅತಿ ಹೆಚ್ಚಿನ ತಾಪಮಾನ ದಾಖಲಾಗಿದೆ.
ಅದರಲ್ಲೂ ಭದ್ರಾಚಲಂ ನಗರದಲ್ಲಿ ಅತ್ಯಧಿಕ ತಾಪಮಾನ ಅಂದರೆ 44.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಅಲ್ಲದೇ ನಲಗೊಂಡ ಜಿಲ್ಲೆಯ ತಾಲೂಕುಗಳಲ್ಲಿ ಹಾಗೇ ಜಗಿತ್ಯಾಲ, ರಾಜಣ್ಣ ಸಿರಿಸಿಲ್ಲ, ಮತ್ತು ಮಹಬೂಬಾಬಾದ್ ಜಿಲ್ಲೆಗಳಲ್ಲಿ ಕೂಡ 44.5 ಡಿಗ್ರಿಗಿಂತ ಹೆಚ್ಚಿನ ತಾಪಮಾನ ದಾಖಲಾಗಿದೆ.
ಕಮ್ಮಂ ನಗರದಲ್ಲಿ ಒಂದೇ ದಿನ 5.1 ಡಿಗ್ರಿ ಸಿಲ್ಸಿಯನ್ಗಿಂತ ಹೆಚ್ಚಿನ ಶಾಖ ದಾಖಲಾಗಿದ್ದು, ಆಲಿಕಲ್ಲು ಮಳೆ ವರದಿಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬುಧವಾರ ಮತ್ತು ಗುರುವಾರ ಅನೇಕ ಪ್ರದೇಶದಲ್ಲಿ ಆಲಿಕಲ್ಲಿನಿಂದ ಕೂಡಿದ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇನ್ನು ಭಾರಿ ಬಿಸಿಲಿಗೆ ಇಬ್ಬರು ಬಲಿಯಾಗಿದ್ದಾರೆ. ಕರೀಂನಗರ ಜಿಲ್ಲೆಯ ಶಂಕರಪಟ್ಟಣಂ ತಾಲೂಕಿನ ಮೊಲಂಗುರ್ನ ಚಿತ್ಲಾ ರಾಮಕ್ಕ (78) ಹುಜರಬಾದ್ನಲ್ಲಿರುವ ತನ್ನ ಮಗನ ಮನೆಗೆ ಹೊರಟಾಗ ಕುಸಿತುಬಿದ್ದು, ಸಾವನ್ನಪ್ಪಿದ್ದಾರೆ.
ಖಾಲಿ ಮದ್ಯದ ಬಾಟಲ್ ಮಾರಿ ಜೀವನ ಸಾಗಿಸುತ್ತಿದ್ದ ಸೂರ್ಯಪೇಟ್ ಜಿಲ್ಲೆಯ ಫನಿಗಿರಿಯ ಸಂಗಮ್ ಸುಂದರಯ್ಯ(70) ಬಿಸಿಲಿನ ತಾಪದಿಂದ ಸಾವನ್ನಪ್ಪಿದ್ದಾರೆ. ಕೊಡಕಂಡ್ಲಾ ತಾಲೂಕಿನ ಮೊಂಡ್ರಯಿಯಲ್ಲಿ ಮಧ್ಯಾಹ್ನ ಖಾಲಿ ಬಾಟಲ್ ಸಂಗ್ರಹಿಸುವಾಗ ಸನ್ಸ್ಟ್ರೋಕ್ಗೆ ಒಳಗಾಗಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.
ಈ ಬಾರಿ ದೇಶದಲ್ಲಿ ಬಿಸಿಲಿನ ತಾಪ ಹೆಚ್ಚಲಿದ್ದು, ಜನರು ಆರೋಗ್ಯ ಸಂಬಂಧಿ ಅಸ್ವಸ್ಥತೆ ಬಗ್ಗೆ ಕಾಳಜಿ ವಹಿಸುವುದು ಅಗತ್ಯವಾಗಿದೆ.
ಶಾಖವು ಮಾರಣಾಂತಿಕವಾಗಿದ್ದು, ಜನರು ಹವಾಮಾನ ಪರಿಸ್ಥಿತಿಗೆ ಅನುಗುಣವಾಗಿ ಜನರು ಅಗತ್ಯ ಕಾಳಜಿ ವಹಿಸಬೇಕಿದೆ.
ಸಾಧ್ಯವಾದಷ್ಟು ತಣ್ಣಗಿರುವ ಮತ್ತು ಸುರಕ್ಷಿತವಾಗಿ ನೆರಳಲ್ಲಿ ಆಶ್ರಯ ಪಡೆಯಬೇಕು. ಸಣ್ಣ ಮುನ್ನೆಚ್ಚರಿಕೆ ವಹಿಸುವುದರಿಂದ ಕೂಡ ದೀರ್ಘಕಾಲದವರೆಗೆ ಶಾಖ ಸಂಬಂಧಿತ ಅಸ್ವಸ್ಥತೆಯಿಂದ ತಡೆಯಬಹುದು
ಜನರು ಕೂಡ ಹೆಚ್ಚು ನೀರು, ದ್ರವಾಹಾರ ಸೇವನೆಗೆ ಒತ್ತು ನೀಡಬೇಕು. ಕೇವಲ ಬಾಯಾರಿಕೆ ಆದಾಗ ಮಾತ್ರವಲ್ಲದೇ, ಪದೇ ಪದೇ ನೀರು ಕುಡಿಯಬೇಕು.
ಸಾಧ್ಯವಾದಷ್ಟು ಹೊರಗಿನ ಕೆಲಸದ ಓಡಾಟವನ್ನು ಬೆಳಗ್ಗೆ ಅಥವಾ ಸಂಜೆ ಸಮಯದಲ್ಲಿ ಇಟ್ಟುಕೊಳ್ಳುವುದು ಸೂಕ್ತ. ಅದರಲ್ಲೂ ಮಧ್ಯಾಹ್ನ 12 ರಿಂದ 3ರ ವರೆಗೆ ಸೂರ್ಯನಿಗೆ ಮೈಯೊಡ್ಡುವುದನ್ನು ತಪ್ಪಿಸಿ.
ನಿಯಮಿತ ದೇಹದ ತಾಪಮಾನ ಪರೀಕ್ಷೆ ನಡೆಸುವುದರಿಂದ ಶಾಖ ಸಂಬಂಧಿತ ಅಸ್ವಸ್ಥತೆಯನ್ನು ತಪ್ಪಿಸಬಹುದು
ಹೊರಗೆ ಹೊರಡುವಾಗ ಸನ್ಸ್ಕ್ರೀನ್ ಹಚ್ಚುವುದು, ಹ್ಯಾಟ್ ಧರಿಸುವುದು, ಸಾಧ್ಯವಾದಷ್ಟು ನೆರಳಿನಲ್ಲಿರುವ ಅಭ್ಯಾಸ ರೂಢಿಸಿಕೊಳ್ಳಬೇಕು. ಜೊತೆಗೆ ಹಗುರ ಮತ್ತು ತೆಳುವಾದ ಬಟ್ಟೆ ಧರಿಸಬೇಕು.