ನವದೆಹಲಿ : ಜನ ಗಣತಿಯ ಜೊತೆಗೆ ಜಾತಿ ಗಣತಿಯನ್ನೂ ನಡೆಸುವುದಾಗಿ ಕೇಂದ್ರ ಸರ್ಕಾರ ಈಗಾಗಲೇ ತಿಳಿಸಿದೆ. ಗಣತಿ ನಡೆಸುವ ದಿನಾಂಕವನ್ನು ಬುಧವಾರ ಪ್ರಕಟಿಸಿತು. ದೇಶದಲ್ಲಿ ಎರಡು ಹಂತದಲ್ಲಿ ಗಣತಿ ನಡೆಯಲಿದೆ ಎಂದು ಕೇಂದ್ರ ಹೇಳಿದೆ.
ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿರುವ ಗೃಹ ಸಚಿವಾಲಯ, ಹವಾಮಾನ ಮತ್ತು ಪ್ರದೇಶಗಳಿಗೆ ಅನುಗುಣವಾಗಿ ಗಣತಿ ನಡೆಯಲಿದೆ. ಲಡಾಖ್, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಅಕ್ಟೋಬರ್ 1, 2026 ರಿಂದ ಮತ್ತು ದೇಶದ ಉಳಿದ ಭಾಗಗಳಲ್ಲಿ ಮಾರ್ಚ್ 1, 2027 ರಿಂದ ಜನ ಗಣತಿಯೊಂದಿಗೆ ಜಾತಿ ಗಣತಿಯೂ ನಡೆಯಲಿದೆ ಎಂದು ತಿಳಿಸಿದೆ.
1948ರ ಜನಗಣತಿ ಕಾಯ್ದೆಯ ಪ್ರಕಾರ ದೇಶದಲ್ಲಿ 10 ವರ್ಷಗಳಿಗೊಮ್ಮೆ ಗಣತಿ ನಡೆಯಲಿದೆ. ಅದರ ಅನುಸಾರವೇ ಈ ಬಾರಿ ಗಣತಿ ಆಗಲಿದೆ. ಅಧಿಸೂಚನೆಯನ್ನು ಜೂನ್ 16 ರಂದು ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.
ಗಣತಿಗೆ ಅಡ್ಡಿಯಾಗಿದ್ದ ಕೋವಿಡ್: 2021 ರಲ್ಲಿ ನಡೆಯಬೇಕಿದ್ದ ಜನಗಣತಿಯು ಕೋವಿಡ್ -19 ಸಾಂಕ್ರಾಮಿಕದಿಂದಾಗಿ ಸ್ಥಗಿತಗೊಂಡಿತ್ತು. ಕೋವಿಡ್ ಹರಡುವುದಕ್ಕೂ ಮೊದಲು, ಜಾತಿ ಗಣತಿ ನಡೆಸಲು ನಿರ್ಧರಿಸಿದ್ದ ಕೇಂದ್ರವು ಅದಕ್ಕಾಗಿ ಮುಹೂರ್ತವನ್ನು ನಿಗದಿ ಮಾಡಿತ್ತು. ಎರಡು ಹಂತದಲ್ಲಿ ಅಂದರೆ, 2020 ರ ಏಪ್ರಿಲ್-ಸೆಪ್ಟೆಂಬರ್ನಿಂದ ಮೊದಲ ಹಂತ, 2021ರ ಫೆಬ್ರವರಿಯಿಂದ ಎರಡನೇ ಹಂತ ಘೋಷಿಸಲಾಗಿತ್ತು.