ನವದೆಹಲಿ: ಬಹು ನಿರೀಕ್ಷಿತ ಡಿಜಿಟಲ್ ಪರ್ಸನಲ್ ಡೇಟಾ ಪ್ರೊಟೆಕ್ಷನ್ (ಡಿಪಿಡಿಪಿ)-2025ರ ಕರಡನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಇದರಲ್ಲಿ ಅಪ್ರಾಪ್ತ ಮಕ್ಕಳು ಮತ್ತು ವಿಕಲಚೇತನರ ವೈಯಕ್ತಿಕ ಡೇಟಾದ ರಕ್ಷಣೆಗೆ ಒತ್ತು ನೀಡಲಾಗಿದೆ. ಆದರೂ ಅದರ ಉಲ್ಲಂಘನೆ ಕುರಿತು ದಂಡನಾತ್ಮಕ ಕ್ರಮದ ಬಗ್ಗೆ ಯಾವುದೇ ಉಲ್ಲೇಖವಿಲ್ಲ.
ಡ್ರಾಫ್ಟ್ ಪ್ರಕಾರ, ಮಕ್ಕಳ ಡೇಟಾದ ಯಾವುದೇ ಬಳಕೆಗೆ ಪೋಷಕರ ಒಪ್ಪಿಗೆ ಕಡ್ಡಾಯವಾಗಿರುತ್ತದೆ. ಅಂದರೆ ಪೋಷಕರ ಒಪ್ಪಿಗೆಯಿಲ್ಲದೆ, ಯಾವುದೇ ಡೇಟಾ ವಿಶ್ವಾಸಾರ್ಹರು (ವೈಯಕ್ತಿಕ ಡೇಟಾವನ್ನು ಸಂಗ್ರಹಿಸುವ ಮತ್ತು ಬಳಸುವ ಸಂಸ್ಥೆಗಳು) ಮಕ್ಕಳ ಡೇಟಾವನ್ನು ಬಳಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದೆ.
ಸುಮಾರು 14 ತಿಂಗಳ ಹಿಂದೆ ಡಿಜಿಟಲ್ ಪರ್ಸನಲ್ ಡೇಟಾ ಪ್ರೊಟೆಕ್ಷನ್ ಆಕ್ಟ್-2023 ಅನ್ನು ಸಂಸತ್ತು ಅನುಮೋದಿಸಿದ ನಂತರ ಕರಡು ನಿಯಮಗಳನ್ನು ಸಾರ್ವಜನಿಕ ಸಮಾಲೋಚನೆಗಾಗಿ ಬಿಡುಗಡೆ ಮಾಡಲಾಗಿದೆ. ಕರಡುಗಳು MyGov ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಡಿಜಿಟಲ್ ವೈಯಕ್ತಿಕ ಡೇಟಾದ ರಕ್ಷಣೆಗಾಗಿ ಕಾನೂನು ಚೌಕಟ್ಟನ್ನು ಬಲಪಡಿಸುವುದು ಇದರ ಉದ್ದೇಶವಾಗಿದೆ.
ಕರಡು ನಿಯಮಗಳು ಡಿಜಿಟಲ್ ಡೇಟಾ ಪ್ರೊಟೆಕ್ಷನ್ ಆಕ್ಟ್, 2023ರ ಅಡಿಯಲ್ಲಿ ವ್ಯಕ್ತಿಗಳ ಒಪ್ಪಿಗೆ, ಡೇಟಾ ಸಂಸ್ಕರಣಾ ಸಂಸ್ಥೆಗಳು ಮತ್ತು ಪ್ರಾಧಿಕಾರಗಳ ಕಾರ್ಯನಿರ್ವಹಣೆಗೆ ಸಂಬಂಧಿಸಿದ ನಿಬಂಧನೆಗಳನ್ನು ರೂಪಿಸುತ್ತವೆ. ನಿಯಮಗಳು ವ್ಯಕ್ತಿಗಳಿಂದ ಸ್ಪಷ್ಟ ಒಪ್ಪಿಗೆಯನ್ನು ಪಡೆಯಲು ಯಾಂತ್ರಿಕ ವ್ಯವಸ್ಥೆಗೆ ಕರೆ ನೀಡುತ್ತವೆ. ಇದಕ್ಕೆ ಫೆಬ್ರವರಿ 18ರ ನಂತರ ಅಂತಿಮ ರೂಪ ಕೊಡಲಿದ್ದೇವೆ ಎಂದು ಡ್ರಾಫ್ಟ್ ಕಮಿಟಿ ಹೇಳಿದೆ.