ತಿರುವನಂತಪುರಂ ಜೂನ್ 14: ಗಲ್ಫ್ ದೇಶದ ದಕ್ಷಿಣ ನಗರವಾದ ಮಂಗಾಫ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಸಂತ್ರಸ್ತರಾಗಿರುವ ರಾಜ್ಯದ ಭಾರತೀಯ ಪ್ರಜೆಗಳ ನೆರವಿಗಾಗಿ ಕುವೈತ್‌ಗೆ ತೆರಳಲು ಕೇಂದ್ರ ಸರ್ಕಾರ ತನಗೆ ಅನುಮತಿ ನೀಡಲಿಲ್ಲ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಶುಕ್ರವಾರ ಆರೋಪಿಸಿದ್ದಾರೆ.
ಬುಧವಾರ ಕುವೈತ್‌ನ ಕಟ್ಟಡವೊಂದಕ್ಕೆ ಬೆಂಕಿ ತಗುಲಿ ಸಾವಿಗೀಡಾದ 45 ಭಾರತೀಯರ ಮೃತದೇಹಗಳನ್ನು ಸ್ವೀಕರಿಸಲು ಅಧಿಕಾರಿಗಳು ವ್ಯವಸ್ಥೆ ಮಾಡುತ್ತಿರುವಾಗ ಬೆಳಿಗ್ಗೆ ಕೊಚ್ಚಿಯ ವಿಮಾನ ನಿಲ್ದಾಣದ ಆಮದು ಕಾರ್ಗೋ ಟರ್ಮಿನಲ್‌ನಲ್ಲಿ ಮೌನ ಮನೆ ಮಾಡಿತ್ತು. ಸಂತ್ರಸ್ತರ ಮೃತದೇಹಗಳನ್ನು ಅವರ ಮನೆಗಳಿಗೆ ಸಾಗಿಸಲು ಆಂಬ್ಯುಲೆನ್ಸ್‌ಗಳನ್ನು ಟರ್ಮಿನಲ್‌ನಲ್ಲಿ ಇರಿಸಲಾಗಿತ್ತು.
ಕುವೈತ್‌ನ ಮಂಗಾಫ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 45 ಭಾರತೀಯರ ಮೃತದೇಹಗಳನ್ನು ಹೊತ್ತ ಭಾರತೀಯ ವಾಯುಪಡೆಯ ವಿಶೇಷ ವಿಮಾನ ಸಿ-130ಜೆ ಶುಕ್ರವಾರ ಬೆಳಗ್ಗೆ ಕೊಚ್ಚಿಗೆ ಬಂದಿಳಿಯಿತು. ಶುಕ್ರವಾರ ಬೆಳಗ್ಗೆ ಕುವೈತ್‌ಗೆ ಆಗಮಿಸಿದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಅವರು ಶೀಘ್ರ ವಾಪಸಾತಿಯನ್ನು ಖಚಿತಪಡಿಸಿಕೊಳ್ಳಲು ಕುವೈತ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿದ್ದರು. ಅವರು ವಿಮಾನದಲ್ಲಿದ್ದರು ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.