ಬೈಲಹೊಂಗಲ:ರಾಜ್ಯದಲ್ಲಿ ಜಾತಿಗಣತಿ ಹೆಸರಿನಲ್ಲಿ ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತುವ ಮುಖ್ಯಮಂತ್ರಿಗಳ ಕುತಂತ್ರವನ್ನು ಕೇಂದ್ರ ಸರಕಾರ ಜನಗಣತಿಯ ಜೋತೆಗೆ ಜಾತಿಗಣತಿ ನಿರ್ಧಾರ ಕೈಗೊಂಡಿದ್ದರಿಂದ ಇವೆಲ್ಲಕ್ಕೂ ಇತಿಶ್ರೀ ಆಗಲಿದೆ ಎಂದು ರಾಜ್ಯ ಬಿಜೆಪಿ ಮಾಧ್ಯಮ ಸಮಿತಿ ಸದಸ್ಯ ಎಫ್.ಎಸ್.ಸಿದ್ದನಗೌಡರ ಹೇಳಿದರು.
ಮಾಧ್ಯಮಗಳ ಜೊತೆ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ ಅವರು, ನರೇಂದ್ರ ಮೋದಿಜೀ ಅವರ ನೇತೃತ್ವದ ಕೇಂದ್ರ ಸರಕಾರವು ಬಹಳ ಉತ್ತಮ ನಿರ್ಧಾರ ಕೈಗೊಂಡಿದೆ. ಬುಧವಾರ ನಡೆದ ಸಂಪುಟ ಸಭೆಯಲ್ಲಿ ಜನಗಣತಿ ಜೊತೆಗೆ ಜಾತಿ ಜನಗಣತಿ ಮಾಡುವ ಪ್ರಮುಖ ನಿರ್ಧಾರ ಮಾಡಿದ್ದು ಸ್ವಾಗತಾರ್ಹ ಎಂದರು.
ಭಾರತದಲ್ಲಿ 1931ರ ನಂತರ ಯಾವತ್ತೂ ಜಾತಿ ಜನಗಣತಿ ಆಗಿರಲಿಲ್ಲ; ಈ ದೇಶದ ಪ್ರತಿಯೊಬ್ಬ ಪ್ರಜೆಗೂ ನ್ಯಾಯ ಸಿಗಬೇಕು; ಎಲ್ಲ ಸಮುದಾಯಗಳಿಗೂ ಸವಲತ್ತು ಸಿಗಬೇಕೆಂಬುದೇ ನರೇಂದ್ರ ಮೋದಿಜೀ ಅವರ ಇಚ್ಛೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಬೇಕೆಂಬ ಧ್ಯೇಯೋದ್ದೇಶದೊಂದಿಗೆ ಪ್ರಧಾನಿ ನರೇಂದ್ರ ಮೋದಿಜೀ ಅವರು ಸೇವೆ ಸಲ್ಲಿಸುತ್ತಿದ್ದಾರೆ.
ಜನಗಣತಿ ಜೊತೆ ಜಾತಿ ಗಣತಿ ಮಾಡುವ ನಿರ್ಧಾರವನ್ನು ರಾಜ್ಯದ ಮುಖ್ಯಮಂತ್ರಿ ಸೇರಿ ಎಲ್ಲರೂ ಸ್ವಾಗತಿಸಿದ್ದಾರೆ. ನಮ್ಮ ರಾಜ್ಯದಲ್ಲಿ ಆಡಳಿತ ನಡೆಸುವ ಕಾಂಗ್ರೆಸ್ ಪಕ್ಷವು ಜಾತಿ- ಜಾತಿಗಳ ನಡುವೆ ವಿಷಬೀಜ ಬಿತ್ತುವ ಮೂಲಕ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ. ಕೇಂದ್ರದ ಈ ನಿರ್ಧಾರದಿಂದ ಅವರಿಗೂ ಆಶ್ಚರ್ಯವಾಗಿದೆ. ಕೇಂದ್ರದಲ್ಲಿ ಸ್ವಾತಂತ್ರ್ಯಾನಂತರ ಇಷ್ಟು ವರ್ಷ ಆಡಳಿತ ನಡೆಸಿದ್ದ ಕಾಂಗ್ರೆಸ್ ಪಕ್ಷವು ಜಾತಿ ಜನಗಣತಿ ಕಾರ್ಯಕ್ಕೆ ಕೈ ಹಾಕಿರಲಿಲ್ಲ.
ಹಿಂದಿನ ಅವಧಿಯಲ್ಲೇ ಹಿಂದುಳಿದ ಸಮುದಾಯಗಳ ಸಮೀಕ್ಷೆ ಕೈಗೊಂಡಿದ್ದು, ಈಗ ಜಾತಿ ಜನಗಣತಿ ಎಂದು ಅವರೇ ಹೇಳುತ್ತಿದ್ದಾರೆ. ರಾಜ್ಯ ಸರಕಾರಕ್ಕೆ ಜಾತಿ ಜನಗಣತಿ ಮಾಡುವ ಅವಕಾಶ ಇಲ್ಲ; ಕೇಂದ್ರ ಸರಕಾರಕ್ಕೆ ಮಾತ್ರ ಈ ಅಧಿಕಾರವಿದ್ದು ಅದರ ದುರಪಯೋಗ ರಾಜ್ಯಸರ್ಕಾರ ಮಾಡಿದೆ. ಇದೆಲ್ಲ ಗೊತ್ತಿದ್ದು ಕೂಡ ಜಾತಿ ವಿಷಬೀಜ ಬಿತ್ತುವ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡುತ್ತಿತ್ತು.
ರಾಜ್ಯದಲ್ಲಿ ಜಾತಿ ಜನಗಣತಿ ಮಾಡಿ 10 ವರ್ಷ ಕಳೆದಿದ್ದು, ಅವಧಿ ಮೀರಿದೆ ಎಂದು ಕಾಂಗ್ರೆಸ್ಸಿನ ಹಿರಿಯ ನಾಯಕ ವೀರಪ್ಪ ಮೊಯಿಲಿ ಅವರೇ ಹೇಳಿದ್ದರು. ಸರಕಾರದ ಬಳಿ ಕಾಂತರಾಜು ಅವರು ನೀಡಿದ್ದ ವರದಿಯೇ ಇಲ್ಲ; ವರದಿ ಇಲ್ಲದೇ ಇದ್ದರೂ ಸಮಾಜಗಳ ನಡುವೆ ಗೊಂದಲ ಸೃಷ್ಟಿಸಲು ಹಾಗೂ ಕಂದಕ ಸೃಷ್ಟಿ ಮಾಡುವ ಕೆಲಸವನ್ನು ಸಿದ್ದರಾಮಯ್ಯರ ನೇತೃತ್ವದ ಕಾಂಗ್ರೆಸ್ ಸರಕಾರ ಮಾಡಿರುವದು ದುರ್ಧೈವ. ರಾಜ್ಯಸರ್ಕಾರ ಈಗಲಾದರೂ ಇದಕ್ಕೆ ಇತಿಶ್ರೀ ಹಾಡಬೇಕು.
ಎಲ್ಲ ಹಿಂದುಳಿದ ಸಮುದಾಯಗಳಿಗೂ ನ್ಯಾಯ ಕೊಡಬೇಕು; ಆ ದೃಷ್ಟಿಕೋನದಿಂದಲೇ ಪ್ರಧಾನಿಯವರು ನಿರ್ಧಾರ ಮಾಡಿದ್ದಾರೆ. ರಾಜ್ಯದಲ್ಲಿ ಜಾತಿಗಣತಿ ಕುರಿತು ಬೊಬ್ಬೆ ಹೊಡೆಯುತ್ತಿರುವ ಕಾಂಗ್ರೆಸ್ಸಿನವರ ಬಳಿ ಯಾವುದೇ ವರದಿ ಇಲ್ಲ.
ಕಾಂತರಾಜು ವರದಿಯ ಪ್ರತಿಯೇ ಇಲ್ಲ; ಜಯಪ್ರಕಾಶ್ ಹೆಗ್ಡೆ ಅವರು ಯಾವ ವರದಿ ಆಧಾರದ ಮೇಲೆ ವರದಿ ನೀಡಿದ್ದಾರೊ ಭಗವಂತನಿಗೆ ಗೊತ್ತು. ಜಯಪ್ರಕಾಶ್ ಹೆಗ್ಡೆ ಅವರೇ ಸರಕಾರಕ್ಕೆ ಪತ್ರ ಬರೆದು ಮೂಲ ವರದಿ ಇಲ್ಲದೇ ಯಾವ ಆಧಾರದಲ್ಲಿ ವರದಿ ಕೊಡಬೇಕೆಂದು ಪ್ರಶ್ನಿಸಿದ್ದರು. ಸಿದ್ದರಾಮಯ್ಯನವರ ಸರಕಾರಕ್ಕೆ ಸದುದ್ದೇಶ ಇಲ್ಲ; ಸಮಾಜಗಳ ನಡುವೆ ಒಡಕನ್ನು ಸೃಷ್ಟಿಸುವ ದುರುದ್ದೇಶ ಬಿಟ್ಟಲ್ಲಿ ಯಾವುದೇ ಒಳ್ಳೆಯ ಉದ್ದೇಶ ಇಲ್ಲ ಎಂದು ತಿಳಿಸಿದರು.