ಬಳ್ಳಾರಿ ಮೇ 20. ಕಲಾವಿದರ ಕಲಾ ಪ್ರತಿಭೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶನಿವಾರದಂದು ನಗರದ ಡಾ.ರಾ???ಕುಮಾರ್ ರಸ್ತೆಯ ನಾಡೋಜ
ಸುಭದ್ರಮ್ಮ ಮನ್ಸೂರು ಬಯಲು ರಂಗಮಂದಿರ ಸಾಂಸ್ಕೃತಿಕ ಸಮುಚ್ಛಯದಲ್ಲಿ ಆಯೋಜಿಸಿದ್ದ ತಿಂಗಳ ಸೊಬಗು ಸಾಂಸ್ಕೃತಿಕ ಕಾರ್ಯಕ್ರಮಗಳು ಜಿಲ್ಲೆಯ ಸಾಂಸ್ಕೃತಿಕ ಗತ ವೈಭವ ಸಾರುವಂತಿತ್ತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಪ್ರತಿ ತಿಂಗಳ ಮೂರನೇ ಶನಿವಾರದಂದು ತಿಂಗಳ ಸೊಬಗು ಕಾರ್ಯಕ್ರಮ ಆಯೋಜಿಸಿ ಸ್ಥಳೀಯ ಮಟ್ಟದ ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತವು ಮಹತ್ತರ ಕಾರ್ಯ ಕೈಗೊಂಡಿದೆ ಹಾಗೂ ಜಿಲ್ಲೆಯ ಸಾಂಸ್ಕೃತಿಕ ಇತಿಹಾಸವನ್ನು ಸಾರುವ ಕಾರ್ಯವು ಸಾರ್ವಜನಿಕರ ಅಚ್ಚುಮೆಚ್ಚಾಗುತ್ತಿದೆ.
ಕಾರ್ಯಕ್ರಮದಲ್ಲಿ ಸೂರ್ಯ ಕಲಾ ಟ್ರಸ್ಟ್ ನ ಸಾಂಸ್ಕೃತಿಕ ನೃತ್ಯ ನೋಡುಗರ ಕಣ್ಮನ ಸೆಳೆಯಿತು. ಯರಿಸ್ವಾಮಿ ಅವರ ಹಾಸ್ಯ ಚಟಾಕಿಗೆ ನೆರೆದಿದ್ದವರು ನಗೆಗಡಲಲ್ಲಿ ತೇಲಾಡಿದರು.ಬಳ್ಳಾರಿಯ ಶ್ರೀ ಗುರು ಪುಟ್ಟರಾಜ ಸಂಗೀತ ಪಾಠಶಾಲೆಯ ಸುಗಮ ಸಂಗೀತವು ಕೇಳುಗರ ಕಿವಿ ತಂಪಾಗಿಸುತ್ತಿತ್ತು ಹಾಗೂ ಸೂರ್ಯ ಕಲಾ ಟ್ರಸ್ಟ್ ನ ಚಿಣ್ಣರ ನೃತ್ಯ ಪ್ರದರ್ಶನ ಪ್ರೇಕ್ಷಕರ ಮನರಂಜನೆಗೆ ಪಾತ್ರವಾಯಿತು.
ಸಾರ್ವಜನಿಕರಿಗೆ ವೀಕ್ಷಿಸಲು ಮುಕ್ತ ಅವಕಾಶ ಕಲ್ಪಿಸಲಾಗಿತ್ತು. ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ ಸೇರಿದಂತೆ ಕಲಾವಿದರು, ಇಲಾಖೆಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.