ಧಾರವಾಡ: ವೃದ್ಧೆ ಒಬ್ಬರೇ ಇದ್ದ ಮನೆಗೆ ಹಾಡಹಗಲೇ ನುಗ್ಗಿ ವೃದ್ಧೆ ಮೇಲೆ ಹಲ್ಲೆ ನಡೆಸಿ ಚಿನ್ನದ ಸರ ಹಾಗೂ ನಗದು ದೋಚಿಕೊಂಡು ಹೋಗಿದ್ದ ಖದೀಮರನ್ನು ಧಾರವಾಡ ವಿದ್ಯಾಗಿರಿ ಠಾಣೆ ಪೊಲೀಸರು ಕೇವಲ ಐದು ಗಂಟೆ ಸಮಯದಲ್ಲಿ ಹೆಡೆಮುರಿ ಕಟ್ಟಿದ್ದಾರೆ.
ಧಾರವಾಡದ ಮಾಳಮಡ್ಡಿ ಬಡಾವಣೆಯ ಡಾ.ಆನಂದ ಕಬ್ಬೂರ ಎಂಬುವವರ ಮನೆಗೆ ಹಾಡಹಗಲೇ ನುಗ್ಗಿದ್ದ ಖದೀಮರು, ಮನೆಯಲ್ಲಿದ್ದ ಡಾ.ಆನಂದ ಅವರ ಪತ್ನಿ ವಿನೋದಿನಿ ಅವರ ಮೇಲೆ ಹಲ್ಲೆ ನಡೆಸಿ ಅವರ ಕೊರಳಲ್ಲಿದ್ದ ಚಿನ್ನದ ಸರ ಹಾಗೂ ಮನೆಯಲ್ಲಿದ್ದ ನಗದು ದೋಚಿಕೊಂಡು ಹೋಗಿದ್ದರು.
ಮುಖ್ಯರಸ್ತೆಗೆ ಹೊಂದಿಕೊಂಡೇ ಮನೆ ಇದ್ದು, ಅದು ಜನನಿಬೀಡ ಪ್ರದೇಶವಾಗಿದೆ. ಹೀಗಿದ್ದರೂ ಯಾವುದೇ ಭಯವಿಲ್ಲದೇ ಖದೀಮರು ಮನೆಗೆ ನುಗ್ಗಿ ವೃದ್ಧೆ ವಿನೋದಿನಿ ಮೇಲೆ ಹಲ್ಲೆ ನಡೆಸಿ ಚಿನ್ನದ ಸರ, ನಗದು ದೋಚಿದ್ದರು. ಅಲ್ಲದೇ ಸಿಸಿಟಿವಿಯ ಡಿವಿಆರ್ ಸಹ ಕದ್ದುಕೊಂಡು ಹೋಗಿದ್ದರು. ಆದರೆ, ಈ ಪ್ರಕರಣವನ್ನು ಕೇವಲ ಐದು ಗಂಟೆಯಲ್ಲೇ ಬೇಧಿಸಿರುವ ವಿದ್ಯಾಗಿರಿ ಠಾಣೆ ಪೊಲೀಸರು ಮೂವರು ಖದೀಮರನ್ನು ಧಾರವಾಡದ ರಾಯಾಪುರದ ಬಳಿ ಹೆಡೆಮುರಿ ಕಟ್ಟಿದ್ದಾರೆ.
ಬೇರೆ ಬೇರೆ ಸಿಸಿಟಿವಿ ಕ್ಯಾಮೆರಾ ಸಹಾಯದಿಂದ ಖದೀಮರಾದ ಅಶೋಕ ಹೊಸಮನಿ, ಶಿವಕುಮಾರ್ ಕೊಕಾಟಿ ಹಾಗೂ ಶಿವಾನಂದ ಕರಡಿಗುಡ್ಡ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ರಾಯಾಪುರದ ಬಳಿ ಈ ಮೂವರನ್ನು ಪೊಲೀಸರು ಬಂಧಿಸುವ ವೇಳೆ ಪೊಲೀಸರ ಮೇಲೆಯೇ ಇವರು ಹಲ್ಲೆಗೆ ಮುಂದಾಗಿದ್ದರು. ಕಳೆದ ವರ್ಷ ಕೂಡ ಈ ಮೂವರು ವಿದ್ಯಾಗಿರಿ ಠಾಣೆ ವ್ಯಾಪ್ತಿಯಲ್ಲೇ ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದರು. ಬೆಳಗಾವಿಯಲ್ಲಿ ಕಳ್ಳತನ ಮಾಡಿದ ಬೆೃಕ್ ಕೃತ್ಯಕ್ಕೆ ಬಳಸುತ್ತಿದ್ದರು.
ಇವರು ತಮ್ಮನ್ನು ತಾವು ಓರ್ವ ಆಟೊ ಚಾಲಕ, ಇನ್ನಿಬ್ಬರು ಕಟ್ಟಡ ಕಾರ್ಮಿಕರು ಎಂದು ಹೇಳಿಕೊಳ್ಳುತ್ತಿದ್ದರು. ಸದ್ಯ ಪೊಲೀಸರ ಅತಿಥಿಯಾಗಿರುವ ಈ ಮೂವರಿಂದ ಮೂರು ಬೈಕ್, ಒಂದು ಆಟೊ, ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆ ಕೇವಲ ಐದು ಗಂಟೆ ಸಮಯದಲ್ಲೇ ಖದೀಮರನ್ನು ಹೆಡೆಮುರಿ ಕಟ್ಟಿರುವ ಪೊಲೀಸರ ಕಾರ್ಯವೈಖರಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.