ದಾಸ ಸಾಹಿತ್ಯದೊಳಗಿರುವ ಸಂಗೀತ ಅಂಶಗಳ ಪರಾಮರ್ಶೆ ಅಭೂತಪೂರ್ವ

Ravi Talawar
ದಾಸ ಸಾಹಿತ್ಯದೊಳಗಿರುವ ಸಂಗೀತ ಅಂಶಗಳ ಪರಾಮರ್ಶೆ ಅಭೂತಪೂರ್ವ
WhatsApp Group Join Now
Telegram Group Join Now
ವಿದುಷಿ ಡಾಕ್ಟರ್ ಶ್ಯಾಮಲಾ ಪ್ರಕಾಶ ಅವರು,ಸಾಹಿತ್ಯ,ಸಂಗೀತ,ಕ್ಷೇತ್ರದಲ್ಲಿ ರಾಷ್ಟ್ರಮಟ್ಟದ ಖ್ಯಾತಿ ಗಳಿಸಿದವರಲ್ಲಿ ಒಬ್ಬರು. ಕನ್ನಡ ಸಾಹಿತ್ಯವನ್ನು ಸಮಗ್ರವಾಗಿ ಅಭ್ಯಾಸ ಮಾಡಿದಂತೆ ಸಂಗೀತದಲ್ಲಿ ಅಪಾರ ಸಾಧನೆಗೈದವರು.ಅವರು ಈಗಾಗಲೇ “ಪ್ರಾಚೀನ ಕನ್ನಡ” ಸಾಹಿತ್ಯದಲ್ಲಿ ಸಂಗೀತದ ಸಾಹಚರ್ಯ” ಮಹಾ ಪ್ರಬಂಧವನ್ನು ಮಂಡಿಸಿ ಮುಂಬಯಿ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ.ಈ ಕೃತಿಗೆ ಅನೇಕ ರಾಜ್ಯ /ರಾಷ್ಟ್ರ ಪ್ರಶಸ್ತಿಗಳು ಬಂದಿವೆ.ಈಗ ಇವರು ಕನ್ನಡ ಸಾಹಿತ್ಯ ಲೋಕಕ್ಕೆ ಅಪರೂಪದ ಕೃತಿ “ದಾಸ ಸಾಹಿತ್ಯದಲ್ಲಿ ಮಾತಿನೊಳಗಣ ಧಾತು” ಕೃತಿ ಅರ್ಪಿಸಿದ್ದಾರೆ.ಇಂಥ ವಿಶಿಷ್ಟ ಸಾಹಿತ್ಯ ಸಂಗೀತ ಕೃತಿಯನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿರುವ ಇವರು ಅಭಿನಂದನಾರ್ಹರು.
    ಸಾಹಿತ್ಯ , ಸಂಗೀತ ಸಹೃದಯತೆಯನ್ನು ಸರ್ವತ್ರ ಹಬ್ಬಿಸುವ ಚೈತನ್ಯ ಶಕ್ತಿಗಳೇ ಆಗಿವೆ.ಸಾಹಿತ್ಯವನ್ನು ರಚಿಸುವ ಶಕ್ತಿ ಹೊಂದಿದವರಿಗೆ ಮೊದಲು ಋಷಿಗಳೆಂದು ಕರೆಯುತ್ತಿದ್ದರು. “ಋಷಿಯಾಗದವ ಕವಿಯಾಗಲಾರ” ಎಂಬ ಮಾತು ಇಂದಿಗೂ ಜನಜನಿತವಾಗಿದೆ.ಹಾಗೇ ಸಂಗೀತ ಇದೊಂದು ದೈವಿ ಕೃಪೆ ಎಂದು ಭಾವಿಸಲಾಗಿದೆ.ಅಲ್ಲದೇ ಸಂಗೀತ ಸಾಧನೆ ಒಂದು ತಪಸ್ಸು ಎಂದು ಬಣ್ಣಿಸಲಾಗಿದೆ.ಸಂಗೀತಗಾರ ತಪಸ್ವಿಗೆ ಸಮಾನ ಎಂಬ ಅಭಿಮತ ಇರುವುದು ವೇದ್ಯವಾಗುತ್ತದೆ. ಈ ವಿಚಾರದ ಹಿನ್ನೆಲೆಯಲ್ಲಿ ವಿದುಷಿ ಡಾಕ್ಟರ್ ಶ್ಯಾಮಲಾ ಪ್ರಕಾಶ್ ಅವರು ಸಾಹಿತ್ಯ ಸಂಗೀತ ಸರಸ್ವತಿಯಾಗಿ ಸಾಧನೆಯನ್ನು ಮಾಡಿದ್ದು, ಗಮನಿಸಬೇಕಾದ ಸಂಗತಿಯಾಗಿದೆ. ಅವರು ಈಗ ರಚಿಸಿ ಸಾಹಿತ್ಯ ಲೋಕಕ್ಕೆ ಅರ್ಪಿಸುತ್ತಿರುವ ಕೃತಿಯು ಸಾಹಿತ್ಯ ಸಂಗೀತದ ಅವರ ಅಪಾರ ಪರಿಶ್ರಮ ಸಾಧನೆ,ಅಧ್ಯಯನಶೀಲತೆಯ ಪ್ರತೀಕವಾಗಿದೆ.
     ಕನ್ನಡ ನಾಡಿನಲ್ಲಿ ಸಾಹಿತ್ಯ ಸಂಗೀತಕ್ಕೆ ಪೂರ್ವ ಇತಿಹಾಸ ರಮ್ಯವೂ , ಹೃದಯವಂತಿಕೆಯಿಂದ ಕೂಡಿದೆ. ಕನ್ನಡ ಭಾಷೆಯು ಇಂದು,ಶಾಸ್ತ್ರೀಯ ಸ್ಥಾನಮಾನ ಪಡೆದುಕೊಂಡಿದೆ. ಅದರಂತೆ ಸಂಗೀತದಲ್ಲಿ ಕರ್ನಾಟಕ ಸಂಗೀತ,ಒಂದು ಮುಖ್ಯ ಸಂಗೀತ ಪ್ರಭೇದವಾಗಿ ಪ್ರಸಿದ್ಧಿ ಪಡೆದಿದೆ.ಸಾಹಿತ್ಯದಲ್ಲಿ ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದಿರುವಂತೆ,ಸಂಗೀತದಲ್ಲೂ ರಾಷ್ಟ್ರ ಪ್ರಶಸ್ತಿ  ಪಡೆದಿರುವ ಅನೇಕ ಪಂಡಿತರಿದ್ದಾರೆ. ಹೀಗೆ ಕನ್ನಡ ನಾಡು,ಸಾಹಿತ್ಯ,ಸಂಗೀತದಲ್ಲಿ ಅಭೂತಪೂರ್ವ ಮತ್ತು ಭವ್ಯ ಪರಂಪರೆ ಹೊಂದಿದೆ,ಕನ್ನಡ ಸಾಹಿತ್ಯದಲ್ಲಿ ವಚನ ಸಾಹಿತ್ಯ, ದಾಸ ಸಾಹಿತ್ಯ ಪ್ರಮುಖ ಘಟ್ಟವಾಗಿ ಗುರುತಿಸಲ್ಪಟ್ಟಿವೆ.
ಕನ್ನಡ ಸಾಹಿತ್ಯದಲ್ಲಿ ಓದುಗಬ್ಬ ಅಂದರೆ,ಪಠಣ ಮಾಡುವ ಕಾವ್ಯ,ಹಾಡುಗಬ್ಬ ಅಂದರೆ ಹಾಡಲು ಉಕ್ತವುಳ್ಳ ಕಾವ್ಯ ಪ್ರಚಲಿತದಲ್ಲಿದೆ. ಅದರಲ್ಲಿ ವಚನ ಸಾಹಿತ್ಯ, ದಾಸ ಸಾಹಿತ್ಯ ಹಾಡುಗಬ್ಬವಾಗಿ ಜನಜನಿತವಾಗಿವೆ.ಈ ವಿಷಯವನ್ನು ವಿದುಷಿ ಡಾಕ್ಟರ್ ಶ್ಯಾಮಲಾ ಪ್ರಕಾಶ ಅವರು ವಸ್ತುನಿಷ್ಠವಾಗಿ ಗುರುತಿಸಿದ್ದಾರೆ.ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಜನ ಸಾಮಾನ್ಯರನ್ನೇ ಗಮನದಲ್ಲಿರಿಸಿಕೊಂಡು ಪ್ರಚಲಿತಕ್ಕೆ ಬಂದ ಕಾರಣ ಅವು ಓದುಗಬ್ಬವಾಗಿ,ಹಾಡುಗಬ್ಬವಾಗಿ ಜನಮನ್ನಣೆ ಪಡೆದುಕೊಂಡವು ಎಂಬುದು ಅಭಿಮಾನದ ಸಂಗತಿಯಾಗಿದೆ.
ದಾಸ ಸಾಹಿತ್ಯವು ಓದುಗಬ್ಬಕ್ಕಿಂತ,ಹಾಡುಗಬ್ಬಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟದ್ದನ್ನು, ವಿದುಷಿ ಡಾಕ್ಟರ್ ಶ್ಯಾಮಲಾ ಪ್ರಕಾಶ್ ಅವರು”ಆಧ್ಯಾತ್ಮ ವಿಚಾರಗಳು ದೇವಭಾಷೆ ಎನಿಸಿಕೊಂಡ ಸಂಸ್ಕೃತದಲ್ಲಿ ಮಾತ್ರ ಉಳಿದುಕೊಂಡು ಪಂಡಿತರ ಗೋಷ್ಠಿ,ಮಠ,ದೇವಾಲಯ,ರಾಜಾಶ್ರಯಗಳಲ್ಲಿ ಮಾತ್ರ ಚರ್ಚೆಯಾಗುತ್ತಿದ್ದವು.ದಾಸರು ಅವುಗಳನ್ನು ಸರಳ ಕನ್ನಡಕ್ಕಿಳಿಸಿದರಲ್ಲದೇ ಅವುಗಳಿಗೆ ಗೇಯರೂಪವನ್ನೂ ಕೊಟ್ಟರು.
ಸರಳ ಭಾಷೆಯಿಂದ ವಿಚಾರ ಚಿಂತನೆ,ಹಾಡಿಕೊಳ್ಳುವ ಕ್ರಿಯೆಯಲ್ಲಿ ಮಾನವನಿಗೆ ಸಿಗುವ ಉಲ್ಲಾಸ ಮತ್ತು ಹಾಡಿಕೊಳ್ಳುವಾಗ ನಡೆಯುವ ಪುನರ್ವಿಚಾರ ಮಂಥನಗಳು ಇವು ದಾಸ ಸಾಹಿತ್ಯಕ್ಕೆ ಸರ್ವ ಮಾನ್ಯತೆಯನ್ನು ತಂದುಕೊಟ್ಟಿವೆಯೆಂಬುದರಲ್ಲಿ ಸಂಶಯವಿಲ್ಲ” ಎಂದು ಹೇಳಿದ್ದು ಮಾರ್ಮಿಕವಾಗಿದೆ.ಒಂದು ಅರ್ಥದಲ್ಲಿ ದಾಸರು ಕಾವ್ಯವನ್ನು ಸಂಗೀತಕ್ಕೆ ಜೋಡಿಸಿ,ಜನಸಾಮಾನ್ಯರಿಗೆ ಬದುಕಿನ ಸುಧೆಯನ್ನು ಆಸ್ವಾದಿಸಲು ಅನುವು ಮಾಡಿಕೊಟ್ಟರು.
ಕಾವ್ಯವೆಂಬ ಹಾಲಿಗೆ,ಸಂಗೀತವೆಂಬ ಸಕ್ಕರೆಯನ್ನು ಬೆರೆಸಿ,ಬದುಕಿನ ಸ್ವಾರಸ್ಯವನ್ನು ಎತ್ತರಿಸಿದರು. ಕನ್ನಡ ಸಾಹಿತ್ಯ ಲೋಕವನ್ನು ಸಿರಿವಂತಗೊಳಿಸಿರುವ ದಾಸರು,ಸಂಗೀತದ ಔತಣವನ್ನು ಪಸರಿಸಿದರು.ಡಾಕ್ಟರ್ ಶ್ಯಾಮಲಾ ಪ್ರಕಾಶ್ ಅವರು ಈ ಕೃತಿಯೊಳಗೆ ದಾಸ ಸಾಹಿತ್ಯ ಮತ್ತು ದಾಸ ಸಾಹಿತ್ಯದ ಪ್ರಸಾರಕ್ಕಾಗಿ, ದಾಸರು ಬಳಸಿದ ಸಂಗೀತ ಎಲ್ಲವನ್ನೂ ತಲಸ್ಪರ್ಶಿಯಾಗಿ ಅಧ್ಯಯನ ಮಾಡಿದ್ದು ಕಂಡು ಬಂದಿದೆ.
ಇದಕ್ಕೆ ಸಾಕ್ಷಿಯಾಗಿ ಅವರು ಈ ಕೃತಿಯೊಳಗೆ ದಾಖಲಿಸಿದ ೧೫೮ ಅಡಿ ಟಿಪ್ಪಣಿಯನ್ನು ಸಾದ್ಯಂತವಾಗಿ ಅವಲೋಕಿಸಬಹುದಾಗಿದೆ. ಇದು ಅವರ ಓದಿನ ಹಸಿವು , ಸಂಶೋಧನೆಯ ಕಸುವನ್ನು ಧೃಡಪಡಿಸುತ್ತದೆ. ಈ ಕೃತಿಯೊಳಗೆ ವಚನ ಸಾಹಿತ್ಯದ ಸ್ವರ ವಚನಗಳ ಉಲ್ಲೇಖವಿದೆ, ಮತ್ತು ದಾಸವರೇಣ್ಯರ ಪದ ,ಸಾಹಿತ್ಯ, ಸಂಗೀತದ ವಿಹಂಗಮ ನೋಟವಿದೆ ಅಂತಹ ಕೆಲ ನೋಟಗಳನ್ನು ಆಯ್ದು ಕೊಡಲಾಗಿದೆ.
 * ದಾಸರು ಮನೆ ಮನೆ ಬಾಗಿಲಿಗೆ ತಮ್ಮ ಕೀರ್ತನೆಗಳ ಮೂಲಕ ಸಂಗೀತವನ್ನು ಸಾಮಾನ್ಯರವರೆಗೂ ತಲುಪಿಸಿದರು.ಈ ಮೂಲಕ ಸಾಮಾನ್ಯ ವರ್ಗದವರನ್ನೂ,ಪ್ರತಿಷ್ಠಿತ ವರ್ಗದವರನ್ನೂ ಸಂಗೀತ ಮಾಧ್ಯಮದಿಂದ ಒಟ್ಟುಗೂಡಿಸಲು ಪ್ರಯತ್ನಿಸಿದರು. “ಸಂಗೀತ,ತಾಳ,ಸ್ವರ,ಮೇಳಗಳೆಲ್ಲ ಏಕಾಗ್ರತೆಯ ಲಕ್ಷಣಗಳೇ” ಆದ್ದರಿಂದ ,ಹರಿದಾಸ ಸಾಹಿತ್ಯದಲ್ಲಿ ಭಕ್ತಿ ಪ್ರಚುರ ಕಾರ್ಯದಲ್ಲಿ ಅಂತರ್ಮುಖಿ ಸಾಧನವಾಗಿ ಸಂಗೀತವು ಅವಿಚ್ಛಿನ್ನ ಭಾಗವೇ ಆಯಿತು.
  *  ಸರ್ವರಿಗೂ ಒಂದೇ ಕೈಯಲ್ಲಿ ಚಿಟಿಕಿಗಳಿಂದ ತಾಳ ಹಾಕಲು ಅನುಕೂಲವಾಗಿರುವ ತಾಳವನ್ನೇ ಹೆಚ್ಚು ಪ್ರಚುರಕ್ಕೆ ತಂದು ಹರಿದಾಸರು ತಾಳ,ಲಯಗಳನ್ನು ಸರಳೀಕರಿಸಿ ಕೊಟ್ಟಿದ್ದಾರೆ.
* ದಾಸರ ಹಾಡುಗಳಲ್ಲಿನ ಲಯಗಳನ್ನು ಅಧ್ಯಯನ ಮಾಡುವದರಿಂದ,ಅನೇಕ ದೇಶೀ ಛಂದಸ್ಸು, ಬಂಧಗಳನ್ನು ಕಂಡುಕೊಳ್ಳಬಹುದಾಗಿದೆ.
* ಕರ್ನಾಟಕದ ಯತಿಗಳು ಮತ್ತು ಸಂತರೇ ಹೊಸ ಸಂಗೀತ ಪದ್ದತಿಯ ಪ್ರವರ್ತಕರಾಗಿದ್ದರಿಂದ ದಕ್ಷಿಣಾದಿ ಸಂಗೀತವು “ಕರ್ನಾಟಕ ಸಂಗೀತ” ವೆಂದು ಖ್ಯಾತವಾಯಿತು. ಕರ್ನಾಟಕ ಸಂಗೀತದ ಬೇರು ಇರುವುದು ದಾಸ ಸಾಹಿತ್ಯದಲ್ಲಿ ಎಂಬ ವಿದ್ವಾಂಸರ ಮಾತುಗಳು ಅರ್ಥಪೂರ್ಣವಾಗಿವೆ.
* ಶ್ರೀಪಾದರಾಜರು ತಮಿಳುನಾಡಿನಲ್ಲಿ ಇದ್ದ ಕಾಲದಲ್ಲಿ ಶ್ರೀರಂಗದಲ್ಲಿ ಇಯಿಲ್ ಮತ್ತು ಇಶ್ವೆ ಎಂಬ ಎರಡು ಪದ್ದತಿಗಳು ಆರಂಭವಾದವು,ಇಯಿಲ್ ಸಂಗೀತದೊಂದಿಗೆ ಸಾಹಿತ್ಯ ಪ್ರಧಾನ,ಇಶ್ವೆ- ಸಾಹಿತ್ಯ ಭಾಗಕ್ಕಿಂತ ಸಂಗೀತ ಪ್ರಧಾನವಾಗಿತ್ತು.
* ಪದ ಉಗಾಭೋಗ,ಸುಳಾದಿ,ವೃತ್ತನಾಮ,ಗೀತ,ದಂಡಕ ಪ್ರಕಾರಗಳಲ್ಲಿ ಶ್ರೀಪಾದರಾಜರ ರಚನೆಗಳಿವೆ.
* ಶ್ರೀಪಾದರಾಜರ ಕೃತಿಗಳಲ್ಲಿ ಕಂಡು ಬರುವ ಆತ್ಮನಿವೇದನೆ,ಆತ್ಮಶೋಧನೆ,ಭಾವಪೂರ್ಣತೆ, ಮುಂದಿನ ಕೀರ್ತನ ರಚನಾಕಾರರಿಗೆ ಆದರ್ಶವಾದವು.
* ವ್ಯಾಸರಾಯರು ಸಂಸ್ಕೃತ ಪ್ರಕಾಂಡ ಪಂಡಿತರಾಗಿದ್ದು,ಸಂಸ್ಕೃತದಲ್ಲಿ ಶಾಸ್ತ್ರ ಗ್ರಂಥಗಳನ್ನು ರಚಿಸಿದರು.ಜೊತೆಯಲ್ಲಿ ಕನ್ನಡದಲ್ಲಿ ಕೀರ್ತನೆಗಳನ್ನು ರಚಿಸಿದ್ದು ಮಹತ್ತರ ಘಟನೆ.
* ತಂಜಾವೂರಿನ ದೊರೆ ತುಳಜಾಜಿ ಎಂಬ ಪ್ರಸಿದ್ಧ ಸಂಗೀತ ಶಾಸ್ತ್ರಕಾರ (೧೭೨೮ – ೧೮೩೬) ತನ್ನ ” ಸಂಗೀತ ಸಾರಾಮೃತ ” ದಲ್ಲಿ ವ್ಯಾಸರಾಯರನ್ನು “ಪ್ರಸಿದ್ಧ ಸಂಗೀತ ವಿದ್ಯಾ ಸಂಪ್ರದಾಯ ಪ್ರವರ್ತಕ” ಎಂದು ಕರೆದಿದ್ದಾರೆ.
* ಕೀರ್ತನೆಗಳೊಂದಿಗೆ ಹಲವಾರು ಸುಳಾದಿಗಳನ್ನೂ,ಪದಗಳೂ,ವ್ರತನಾಮಗಳೂ,ಉಗಾಭೋಗಗಳನ್ನೂ ವ್ಯಾಸರಾಯರು ರಚಿಸಿದ್ದಾರೆ.
* ವಾದಿರಾಜರಿಗೆ ಜಾನಪದ ಗೇಯ ಪ್ರಚಾರಗಳ ಒಲವು ಅಧಿಕವಾಗಿವಾಗಿತ್ತೆನಿಸುತ್ತದೆ.ಅವರ ಕೀರ್ತನೆಗಳಲ್ಲಿ ಅಂತಹ ಚಿತ್ರಣಗಳು ಅಧಿಕವಾಗಿ ಕಾಣಿಸಿಕೊಳ್ಳುತ್ತವೆ.
* ಸರ್ವಜ್ಞನೂ ತನ್ನ ತ್ರಿಪದಿಯಲ್ಲಿ ನಾಟಿರಾಗವೇ ಲೇಸು ಎಂದಿದ್ದಾನೆ.ಇಂದಿಗೂ ಸಂಗೀತ ಕಛೇರಿ,ಭಜನೆ, ನಾಟ್ಯ,ನಾಟಕಗಳೆಲ್ಲವೂ ಗೇಯ ಅಥವಾ ಗೇಯ ಸಂಬಂಧಿತ ಕಲಾ ಪ್ರಕಾರಗಳಲ್ಲಿ ನಾಟ ರಾಗದಿಂದಲೇ ಪ್ರಾರಂಭ ಮಾಡುವ ವಾಡಿಕೆ ಇದೆ.
* ವಾದಿರಾಜರ ಕೀರ್ತನೆಗಳ ಆಂತರ್ಯದಲ್ಲಿ ಅವರ ಸಂಗೀತಜ್ಞಾನ , ಕಲಾಸಕ್ತಿ,ದೇಶೀ ಸಂಗೀತದ ಒಲವು ಮೊದಲಾದ ವಿಚಾರಗಳು ಗಮನಿಸಬಹುದಾದ ಅಂಶಗಳಾಗಿವೆ.
* ಪುರಂದರಾಸರು ಸಂಗೀತಕ್ಕೆ ನೀಡಿದ ಕೊಡುಗೆಗಳನ್ನು ಎರಡು ಪ್ರಮುಖ ನೆಲೆಗಳಲ್ಲಿ ವಿಶ್ಲೇಷಿಸಬಹುದಾಗಿದೆ. ಒಂದು ಪುರಂದರ ದಾಸರು ನೇರವಾಗಿ ಸಂಗೀತಕ್ಕೆ ಕೊಟ್ಟ ಕೊಡುಗೆಗಳು , ಇನ್ನೊಂದು ತಮ್ಮ ಕೃತಿಯೊಳಗಿನ ಸಾಹಿತ್ಯ ರೂಪದಿಂದ ವಿವರಿಸಿರುವ ಸಂಗೀತ ವಿಚಾರಗಳು. ಕರ್ನಾಟಕ ಸಂಗೀತದ ಕಲಿಕೆಯ ಸಾಂಪ್ರದಾಯವನ್ನು ಆರಂಭಿಸಿದವರೇ ಪುರಂದರ ದಾಸರು.
ಪ್ರಸ್ತುತ ಕರ್ನಾಟಕ ಸಂಗೀತ ಶಿಕ್ಷಣ ಕ್ರಮದಲ್ಲಿರುವ ಸರಳ ವರಸೆ ಜಂಟಿ ವರಸೆ, ಹೆಚ್ಚು ಸ್ಥಾಯಿ ವರಸೆ, ಅಲಂಕಾರ ಪಿಳ್ಳಾರಿ ಗೀತೆಗಳು ಈ ಪ್ರಥಮ ಸೋಪಾನವನ್ನು ರಚಿಸಿ ಕೊಟ್ಟವರು ಪುರಂದರದಾಸರು.
“ಪುರಂದರ ದಾಸರ ಪ್ರಭಾವ ಹಿಂದೂಸ್ಥಾನಿ ಸಂಗೀತದ ಮೇಲೆಯೂ ಆಗಿದೆ. ಪ್ರಖ್ಯಾತ ಹಿಂದೂಸ್ಥಾನಿ ಸಂಗೀತ ವಿದ್ವಾಂಸರಾಗಿದ್ದ ತಾನಸೇನರಿಗೆ ಗುರುಗಳಂತಿದ್ದ ಸ್ವಾಮಿ ಹರಿದಾಸರು ಪುರಂದರ ದಾಸರ ಶಿಷ್ಯರು.
ಪುರಂದರ ದಾಸರಿಗೆ ಇದ್ದ ಸಂಗೀತ ಸೂಕ್ಷ್ಮ ನೋಟಗಳು ವಿದ್ಯಾ ಪ್ರಾವೀಣ್ಯತೆ ಅವರ ಕೀರ್ತನೆಗಳಲ್ಲಿ ಹಲವು ವಿಧಗಳಲ್ಲಿ ವ್ಯಕ್ತವಾಗಿದೆ. ಸಂಗೀತ ವಾದ್ಯಗಳ ಬಳಕೆ ತಾಳ-ರಾಗಗಳ ಸೂಚನೆ, ನಾಟ್ಯ ಕಲೆಯೊಂದಿಗೆ ಹೆಣೆದುಕೊಂಡ ಸಂಗೀತ ವಿಚಾರಗಳು ಭಕ್ತಿ ರಸದೊಂದಿಗೆ ಸ್ಪುರಿತವಾದ ಸಂಗೀತ ವಿಚಾರಗಳು ಹೀಗೆ ಹಲವಾರು ಬಗೆಗಳಲ್ಲದೆ ಕೆಲವೆಡೆ ಸುದೀರ್ಘ ಸಾಲುಗಳಲ್ಲಿ ಸಂಗೀತವೇ ಚರ್ಚೆಯಾದರೆ ಕೆಲವೆಡೆ ಅವು ಮಿಂಚಿ ಮಾಯವಾಗುತ್ತವೆ. ಸಂಗೀತ ವಿದ್ಯೆ ಮತ್ತು ಸಂಗೀತ ಕಲೆಯು ಸಿದ್ಧಿಸಲು ಬೇಕಾದ ಸಾಧನೆಯ ಮಾರ್ಗವನ್ನೇ ಪುರಂದರ ದಾಸರು ಈ ಪುಟ್ಟ ಕೀರ್ತನೆಯಲ್ಲಿ ಉಪದೇಶಿಸಿದ್ದಾರೆ.
ತಾಳಬೇಕು ತಕ್ಕ ಮೇಳಬೇಕು ಶಾಂತ ವೇಳಬೇಕು ಗಾನ ಕೇಳಬೇಕೆಂಬುವರಿಗೆ ||ಪ||
ಯತಿ ಪ್ರಾಸವಿರಬೇಕು ಗತಿನೆ ನಿಲ್ಲಿಸಬೇಕು
ರತಿ ಪತಿ ಪಿತನೊಳು ಅತಿ ಪ್ರೇಮವಿರಬೇಕು ||೧||
ಗಳಶುದ್ಧ ಇರಬೇಕು ತಿಳಿದು ಪೇಳಲು ಬೇಕು
ಕಳವಳ ಬಿಡಬೇಕು ಕಲೆಮುಖ ವಿರಬೇಕು ||೨||
ಅರಿತವರಿರಬೇಕು ಹರುಷ ಹೆಚ್ಚಲಿ ಬೇಕು
ಗುರುಮಧಪತಿ ವಿಠಲನ ಪರದೈವವೆನಬೇಕು ||೩||
ವಚನ ಸಾಹಿತ್ಯದಲ್ಲಿ “ಭಕ್ತಿ” ಮುಖ್ಯವಾಗಿದೆ. ದಾಸಸಾಹಿತ್ಯದಲ್ಲಿ ಭಕ್ತಿಯೊಂದಿಗೆ ಪ್ರೇಮವೂ ಸೇರಿಕೊಂಡಿರುವುದು ಗಮನಾರ್ಹ ವಚನಕಾರರು ಭಕ್ತಿಯಿಲ್ಲದ ಪೂಜೆ ನಿಷ್ಪ್ರಯೋಜಕವೆಂದರೆ, ಪುರಂದರ ದಾಸರು. ’ಕೇಳನೋಹರಿ ತಾಳನೋ ಪೇಮವಿಲ್ಲದ ಗಾನ’ ಎಂದೇ ಹಾಡಿದ್ದಾರೆ.
ದಾಸ ಸಾಹಿತ್ಯವೆಂದ ಕೂಡಲೇ ಪುರಂದರ ಕನಕದಾಸರ ಹೆಸರುಗಳು ಒಟ್ಟಿಗೇ ಸ್ಮರಣೆಗೆ ಬರುತ್ತದೆ. ಕಾವ್ಯಗುಣದ ವಿಚಾರವಾಗಿ ’ಪುರಂದರ ದಾಸರ ಕೀರ್ತನೆಗಳಿಗಿಂತ ಕನಕದಾಸರ ಕೀರ್ತನೆಗಳು ಒಂದು ಕೈ ಮಿಗಿಲೇ ಎಂಬುದು ಎಲ್ಲರ ಗಮನಕ್ಕೆ ಬರುವ ವಿಚಾರವೇ.
ಕನಕದಾಸರು ತಮ್ಮ ಭಾಷೆ ಪ್ರಾವೀಣ್ಯತೆಯಲ್ಲಿ ರಚಿಸಿರುವ ಕೀರ್ತನೆಗಳು ಹಲವಾರು ಗೇಯ ವಿಚಾರಕ್ಕೆ ಸಂಬಂದ ಪಟ್ಟಂತೆ ಹೇಳುವುದಾದರೆ, ಉದಯರಾಗವೆಂದರಲ್ಲಿ ವರರುದ್ರವೀಣಿಗಳ ಪಿಡಿದು ಸನಕಾದಿಗಳು ಹರುಷದಲಿ ತ್ರಯದಶದ್ವಯ ರಾಗದಿಂ ಸಪ್ತಸ್ವರದಿ ಪಾಡುತತ್ವೆದಿಹರು ಎಂದಿದ್ದಾರೆ.
ಇಲ್ಲಿ ತ್ರಯದಶದ್ವಯ ಎಂಬ ಪದವು ತ್ರಯದಶ-ಧ್ವಯ ಅಂದರೆ ಮೂವತ್ತೆರಡು ಆಗಿದ್ದು ವಚನಕಾರರು ಸೂಚಿಸಿರುವ ’ಬತ್ತೀಸ’ ರಾಗವೇ ಆಗಿದೆ ಕನಕದಾಸರಿಗೆ ರಾಗಗಳ ಪರಿಚಯವು ಸುಸ್ಪಷ್ಟವಾಗಿತ್ತು. ಪುರಂದರದಾಸರ ಕಾಲದ ನಂತರ ಗುಪ್ತಗಾಮಿನಿಯಾಗಿದ್ದ ಹರಿದಾಸ ಸಾಹಿತ್ಯ ವಾಹಿನಿಯು ವಿಜಯದಾಸರಿಂದ ಮತ್ತೆ ಮುಖ್ಯವಾಹಿನಿಗೆ ಬಂದು ನೆಲೆ ನಿಂತಿತು. ಜಗನ್ನಾಥದಾಸರ ತಂದೆ ನರಸಿಂಹದಾಸರು ಮಹಾನ್ ಗಾಯಕರೂ ಆಗಿದ್ದರೆಂದು ಅವರ ಕೀರ್ತನೆಗಳಲ್ಲಿ ಸ್ಪಷ್ಟವಾಗುತ್ತದೆ.
ಗೋಪಾಲದಾಸರ ಕೀರ್ತನೆಗಳಲ್ಲಿ ಸಂಗೀತ ಸಾಹಿತ್ಯಗಳು ಸಮಪ್ರಮಾಣದಲ್ಲಿ ಬಳಕೆಯಾಗಿದ್ದು ಹಾಡಲು ಯೋಗ್ಯವಾಗಿವೆ.
ಈ ಕೃತಿಯೊಳಗೆ ಪುರಂದರದಾಸರ ಕನಕದಾಸರ ಹಾಗೇ ಜಗನ್ನಾಥದಾಸರ ಕೃತಿಗಳಲ್ಲಿ ಅಡಕವಾಗಿರುವ ಸಾಹಿತ್ಯಿಕ ಮತ್ತು ಸಂಗೀತ ಅಂಶಗಳನ್ನು ಡಾ. ಶ್ಯಾಮಲಾ ಪ್ರಕಾಶ ಅವರು ಎಳೆ-ಎಳೆಯಾಗಿ ಹಿಂಜಿ ಇಟ್ಟಿದ್ದಾರೆ. ಇದು ಅವರ ಅಪಾರ ಅನುಭವವನ್ನು ಸೂಚಿಸುತ್ತದೆ.
ಮಹಿಳಾ ದಾಸ ಸಾಹಿತ್ಯ, ಸಂಗೀತ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದ ಹೆಳವನಕಟ್ಟೆ ಗಿರಿಯಮ್ಮ, ಹರಪನಹಳ್ಳಿ ಭೀಮವ್ವ ಗಲಗಲಿ ಅವ್ವ, ನಂಜನಗೂಡು ತಿರುಮಲಾಂಬಾ, ಚಿತ್ರದುರ್ಗದ ಗುಂಡಮ್ಮ ಸರಸ್ವತಿ ಲಾಮಿ, ಇವರೂ ಸಹ ತಮ್ಮ ಕೃತಿ, ಕೀರ್ತನೆಗಳ ಮೂಲಕ ಪ್ರಸಿದ್ಧ ಹೊಂದಿದ್ದಾರೆ. ಲೇಖಕರಾದ ಡಾ. ಶ್ಯಾಮಲಾ ಪ್ರಕಾಶ ಅವರು ಇಲ್ಲಿ ಮಹಿಳಾ ದಾಸ ವಣಿಗಳ ಪರಿಚಯದೊಂದಿಗೆ ಕನ್ನಡ ನಾಡಿನ ಸಾಹಿತ್ಯ ಸಂಗೀತ ಕ್ಷೇತ್ರಕ್ಕೆ ಅವರು ನೀಡಿರುವ ಕೊಡುಗೆಯನ್ನು ಸಂಕ್ಷಿಪ್ತಗೊಳಿಸಿ ಹೇಳಿದ್ದು ಮೆಚ್ಚುವ ಸಂಗತಿ.
“ದಾಸ ಸಾಹಿತ್ಯದಲ್ಲಿ ಮಾತಿನೊಳಗಣ ಧಾತು” ಈ ಕೃತಿಯೊಳಗೆ ದಾಖಲುಗೊಂಡಿರುವ ವಸ್ತು ವಿಷಯಗಳು ದಾಸ ಸಾಹಿತ್ಯ ಸಹೃದಯರಿಗೆ ಮತ್ತು ಸಂಗೀತ ಆಸಕ್ತರಿಗೆ ರಸದೌತಣವನ್ನು ಕೊಡುವಷ್ಟು ರಸಯುಕ್ತವಾಗಿವೆ.
ಈ ಕೃತಿಯನ್ನು ಅವಲೋಕಿಸುತ್ತ ತನ್ಮಯದಿಂದ ಜಾಲಾಡುತ್ತ ಹೋದರೆ, ದಾಸ ಸಾಹಿತ್ಯದೊಳಗಿನ ಅರ್ಥ ವಿನ್ಯಾಸಗಳೆಲ್ಲವೂ ತೆರೆದುಕೊಂಡ ಅನುಭವ ಆಗದಿರದು ದಾಸವರೇಣ್ಯರೆಲ್ಲರೂ ಜನರ ಬದುಕು ಎತ್ತರಗೊಳ್ಳಲಿ ನೈತಿಕತೆ, ಪ್ರಾಮಾಣಿಕತೆ ರೀತಿ ನೀತಿಗಳ ಅನುಸರಣೆ ಬದ್ಧತೆಯಿಂದ ಕೂಡಿಕೊಳ್ಳಲಿ ಎಂಬ ಸದಾಶಯದೊಂದಿಗೆ ತಾವು ಕಂಡುಕೊಂಡ ಅನುಭಾವವನ್ನು ಸಾಹಿತ್ಯವನ್ನಾಗಿಸಿ ಆ ಸಾಹಿತ್ಯವನ್ನು ಸಂಗೀತಮಯ ಗೊಳಿಸಿ ಪಸರಿಸಿರುವುದೆಲ್ಲವೂ ಈ ಕೃತಿಯೊಳಗೆ ಅತ್ಯಂತ ಕರಾರುವಾಕ್ಕಾದ ಪುರಾವೆಗಳಿಂದ ದಾಖಲುಗೊಂಡಿದೆ.
ಸಾಹಿತ್ಯ, ಸಂಗೀತ ಜೊತೆ ಜೊತೆಯಾದಾಗ ಬದುಕಿಗೆ ಅರ್ಥವನ್ನು ಸಾಹಿತ್ಯವು ಒಂದು ಹಂತಕ್ಕೆ ತಲುಪಿಸಿದರೆ, ಇನ್ನೊಂದು ದಡಕ್ಕೆ ಸಂಗೀತವು ಮುಟ್ಟಿಸುತ್ತದೆಂಬ ಆಶಯವು ಈ ಕೃತಿಯ ಜೀವಾಳದಂತಿದೆ ವರಕವಿ ಬೇಂದ್ರೆಯವರು ಕಾವ್ಯ ಕುರಿತು ಹೇಳಿರುವ ವಿಚಾರವು ಈ ಕೃತಿಯನ್ನು ಓದಿದರೆ ನೆನಪಾಗದಿಂದು “ಕಾವ್ಯವು ಸಂಗೀತದಂತೆ ಅಲಾಪದೊಡನೆ ರಾಗ ಸಂಯೋಜನೆ ತಾನುಗಳ ಮೇಲೆ ತಾನು ಅರ್ಥದ ಪದರುಗಳ ಮೇಲೆ ಪದರುಗಳ ತೆರೆ ತೆರೆಯುತ್ತ ಹೋಗಬೇಕು ಕಾವ್ಯವು ಬರೀ ಓದಿದರೆ ಸಾಲದು ಹಾಡಿಕೊಳ್ಳಬೇಕು, ಮಂತ್ರದಂತೆ ಗುಣಗುಣಿಸಬೇಕು. ಭಣಭಣಿಸಬೇಕು ಆಗ ಆದರ ಒಳಗಿನ ಅರ್ಥಗಳೆಲ್ಲ ತೆರೆಯುತ್ತಾ ಹೋಗುತ್ತವೆ. ಡಾ. ಶ್ಯಾಮಲಾ ಪ್ರಕಾಶ್ ಅವರು ಈ ಕೃತಿಯೊಳಗೆ ದಾಸವರೇಣ್ಯರ ಸಾಹಿತ್ಯ ಮತ್ತು ಸಂಗೀತದ ಎಲ್ಲ ಮಗ್ಗುಲುಗಳನ್ನು ಸಹೃದಯರಿಗೆ ತೆರೆದಿಡುವಲ್ಲಿ ಯಶಸ್ವಿಯಾಗಿದೆ.
ಕನ್ನಡ ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದಲ್ಲಿ ದಾಸವರೇಣ್ಯರ ಅನುಪಮ ಸಾಧನೆ-ಸಿದ್ಧಿಗಳನ್ನು ಸಂಶೋಧನೆಯ ಶಿಸ್ತಿನಲ್ಲಿ ಡಾ. ಶ್ಯಾಮಲಾ ಪ್ರಕಾಶ ಅವರು “ದಾಸ ಸಾಹಿತ್ಯದಲ್ಲಿ ಮಾತಿನೊಳಗಣ ಧಾತು” ಎಂಬ ಕೃತಿಯನ್ನು ರಚಿಸಿದ್ದು ಒಂದು ದಾಖಲಾರ್ಹ ಸಂಗತಿಯಾಗಿದೆ ಇದೊಂದು ಸಾಹಿತ್ಯದೊಂದಿಗೆ ಸಂಗೀತದ ಕೃತಿಯಾಗಿ ಕನ್ನಡ ಸಾರಸ್ವತ ಲೋಕದಲ್ಲಿ ನಿಲ್ಲಬಲ್ಲದೆಂದು ಧಾರಾಳವಾಗಿ ಹೇಳಬಹುದಾಗಿದೆ.
– ಸ.ರಾ. ಸುಳಕೂಡೆ
# ೧೩೧೯, ಶ್ರೀ ಶಿವಪ್ರಸಾದ ರಾಮತೀರ್ಥನಗರ,
ಬೆಳಗಾವಿ-೫೯೦೧೧೫.
WhatsApp Group Join Now
Telegram Group Join Now
Share This Article