ಬೆಳಗಾವಿ,23: ರಾಜ್ಯ ಸೇರಿದಂತೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಬೆಳಗಾವಿ ಜಿಲ್ಲೆಯ ಗ್ರಾಮವೊಂದರ ಮಹಿಳೆ ವಿವಸ್ತ್ರಗೊಳಿಸಿ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಷರತ್ತು ಬದ್ಧ ಜಾಮೀನು ಸಿಕ್ಕಿದೆ. ಆರೋಪಿಗಳನ್ನು ಅವರ ಬೆಂಬಲಿಗರು ಸ್ವಾಗತ ಮಾಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಆರೋಪಿಗಳಿಗೆ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದ್ದು, ನಿನ್ನೆ ಜೈಲಿನಿಂದ ಆರೋಪಿಗಳು ಬಿಡುಗಡೆಯಾಗಿದ್ದಾರೆ. ಹಿಂಡಲಗಾ ಜೈಲಿನಿಂದ ಹೊರಬಂದ ಆರೋಪಿಗಳಿಗೆ ಅವರ ಆಪ್ತರು ಸ್ವಾಗತಿಸಿದ್ದಾರೆ. ಪ್ರಕರಣದ ಪ್ರಮುಖ ಬಸಪ್ಪಆರೋಪಿ ನಾಯಕ್ಗೆ ಹೂವಿನ ಹಾರ ಹಾಕಿ ಸ್ವಾಗತ ಮಾಡಿದ್ದಾರೆ. 2023ರ ಡಿಸೆಂಬರ್ 11ರಂದು ವಂಟಮೂರಿಯಲ್ಲಿ ಅಮಾನವೀಯ ಘಟನೆ ನಡೆದಿತ್ತು. ಪ್ರಕರಣದಲ್ಲಿ 13 ಆರೋಪಿಗಳನ್ನು ಕಾಕತಿ ಪೊಲೀಸರು ಬಂಧಿಸಿದ್ದರು.
ವಂಟಮೂರಿ ಪ್ರಕರಣ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿತ್ತು. ಪ್ರಮುಖ ಆರೋಪಿ ಬಸಪ್ಪ ಹಿಂಡಲಗಾ ಜೈಲಿನಿಂದ ಬಿಡುಗಡೆಯಾಗಿದ್ದರಿಂದ ಆರೋಪಿಗೆ ಹೂವಿನ ಹಾರ ಹಾಕಿ ಸ್ವಾಗತ ಮಾಡಿರುವ ವಿಡಿಯೋಗೆ ವಿವಿಧ ಹಾಡುಗಳನ್ನು ಸೇರಿಸಿ ಎಡಿಟ್ ಮಾಡಲಾಗಿದೆ. ಆರೋಪಿಗಳಿಗೆ ಸ್ವಾಗತ ಕೋರಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಹಿಳೆಯನ್ನು ಅಮಾನವೀಯವಾಗಿ ವಿವಸ್ತ್ರಗೊಳಿಸಿ ದುಷ್ಕೃತ್ಯ ಎಸಗಿದ ಪ್ರಕರಣಕ್ಕೆ 4 ತಿಂಗಳು ಕಳೆಯವುದರೊಳಗೆ ಆರೋಪಿಗಳಿಗೆ ಜಾಮೀನು ಸಿಕ್ಕಿದ್ದಕ್ಕೆ ಮತ್ತು ಬಿಡುಗಡೆಯಾದ ಆರೋಪಿಗಳನ್ನು ಸ್ವಾಗತಿಸಿದ ರೀತಿಗೆ ಸಾರ್ವಜನಿಕರು ಕಿಡಿಕಾರಿದ್ದಾರೆ.