ಹೈದರಾಬಾದ್‌ನಲ್ಲಿ 72ನೇ ‘ವಿಶ್ವ ಸುಂದರಿ ಸ್ಪರ್ಧೆʼಗೆ ಚಾಲನೆ; 110 ದೇಶಗಳ ಸುಂದರಿಯರು ಭಾಗಿ!

Ravi Talawar
ಹೈದರಾಬಾದ್‌ನಲ್ಲಿ 72ನೇ ‘ವಿಶ್ವ ಸುಂದರಿ ಸ್ಪರ್ಧೆʼಗೆ ಚಾಲನೆ; 110 ದೇಶಗಳ ಸುಂದರಿಯರು ಭಾಗಿ!
WhatsApp Group Join Now
Telegram Group Join Now

ಹೈದರಾಬಾದ್​(ತೆಲಂಗಾಣ): 72ನೇ ‘ವಿಶ್ವ ಸುಂದರಿ ಸ್ಪರ್ಧೆ’ 110 ದೇಶಗಳ ಸುಂದರಿಯರ ಭವ್ಯ ಪ್ರವೇಶದೊಂದಿಗೆ ಹೈದರಾಬಾದ್‌ನಲ್ಲಿ ಆರಂಭವಾಗಿದೆ. ಶನಿವಾರ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಜಾಗತಿಕ ಸ್ಪರ್ಧೆಗೆ ಚಾಲನೆ ನೀಡಿದರು.

ಸಂಜೆ ವಾತಾವರಣ ತಂಪಾಗುತ್ತಿದ್ದಂತೆ ಸಾಂಪ್ರದಾಯಿಕ ಉಡುಗೆಯಲ್ಲಿ ದೇವತೆಗಳಂತೆ ಕಂಗೊಳಿಸಿದ 110 ದೇಶದ ಸ್ಪರ್ಧಿಗಳು, ರ‍್ಯಾಂಪ್‌ ವಾಕ್​ ಮೂಲಕ ಮಿಂಚಿದರು. ಚೆಲುವೆಯರ ಸೌಂದರ್ಯದ ಮುಂದೆ ಅಲಂಕಾರಿಕ ವಿದ್ಯುತ್​ ದೀಪಗಳು ಮತ್ತು ಸಂಗೀತವೂ ಮಂಕಾದಂತೆ ಭಾಸವಾಯಿತು.

ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣ ಮಿಸ್ ವರ್ಲ್ಡ್ ಸ್ಪರ್ಧೆಯ ಆರಂಭಿಕ ಸಮಾರಂಭಕ್ಕೆ ವೇದಿಕೆಯಾಗಿತ್ತು. ತೆಲುಗು ರಾಜ್ಯಗಳ ಇತಿಹಾಸದಲ್ಲೇ ಈ ಸ್ಪರ್ಧೆ ನಡೆಯುತ್ತಿರುವುದು ಇದೇ ಮೊದಲು. ಉದ್ಘಾಟನಾ ಕಾರ್ಯಕ್ರಮದಲ್ಲಿ ಕವಿ ಅಂದೇಶ್ರಿ ವಿರಚಿತ ತೆಲಂಗಾಣದ ರಾಜ್ಯ ಗೀತೆ “ಜಯಜಯಹೇ ತೆಲಂಗಾಣ ಜನನಿ ಜಯಕೇತನಂ” ಅನ್ನು ರಾಮಾಚಾರಿ ಅವರ ವಿದ್ಯಾರ್ಥಿ ಬಳಗದ 50 ಗಾಯಕರು ಸೊಗಸಾಗಿ ಹಾಡಿದರು.

ಭವ್ಯ ಸಮಾರಂಭದಲ್ಲಿ ಸಿಎಂ ರೇವಂತ್​ ರೆಡ್ಡಿ ಅವರೊಂದಿಗೆ ಉದ್ಯಮಿ ಸುಧಾ ರೆಡ್ಡಿ, ತೆಲಂಗಾಣ ಸರ್ಕಾರದ ವಿಶೇಷ ಪ್ರತಿನಿಧಿ ಜಿತೇಂದರ್ ರೆಡ್ಡಿ, ಮಿಸ್ ವರ್ಲ್ಡ್ ಕ್ರಿಸ್ಟಿನಾ, ಸಿಇಒ ಜೂಲಿಯಾ ಮೋರ್ಲಿ, ಸಚಿವ ಜೂಪಲ್ಲಿ ಕೃಷ್ಣ ರಾವ್, ಸಿಎಸ್ ರಾಮಕೃಷ್ಣ ರಾವ್ ಹಾಗು ಡಿಜಿಪಿ ಜಿತೇಂದರ್ ಮಂತಾದವರು ಉಪಸ್ಥಿತರಿದ್ದರು.

ಸುಂದರಿಯರಿಗೆ ಜಾನಪದ ನೃತ್ಯದ ಸ್ವಾಗತ: ತೆಲಂಗಾಣ ರಾಜ್ಯದ ಜಾನಪದ ನೃತ್ಯಗಳೊಂದಿಗೆ ನಾಲ್ಕು ಖಂಡಗಳ ಸ್ಪರ್ಧಿಗಳ ಪರಿಚಯ ವೀಕ್ಷಕರಿಗೆ ಹೊಸ ಅನುಭವ ನೀಡಿತು. ಕೊಮ್ಮುಕೋಯ ಕಲಾವಿದರು ಲ್ಯಾಟಿನ್ ಅಮೆರಿಕನ್ ದೇಶಗಳ ಸ್ಪರ್ಧಿಗಳನ್ನು ಆಹ್ವಾನಿಸಿದರು. ಅರ್ಜೆಂಟೀನಾದ ಸ್ಪರ್ಧಿಗಳು ಮೊದಲು ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದರು. ಬಳಿಕ ಆಫ್ರಿಕನ್ ಖಂಡದ ವಿವಿಧ ದೇಶಗಳ ಸ್ಪರ್ಧಿಗಳನ್ನು ಗೊಂಡ್ ಬುಡಕಟ್ಟಿನ ಗುಸ್ಸಾಡಿ ನೃತ್ಯದೊಂದಿಗೆ ಸ್ವಾಗತಿಸಲಾಯಿತು. ಯುರೋಪಿಯನ್ ದೇಶದ ಸ್ಪರ್ಧಿಗಳನ್ನು ಲಂಬಾಡಿ-ಡಪ್ಪುಲು ಪ್ರದರ್ಶನದೊಂದಿಗೆ ಬರಮಾಡಿಕೊಳ್ಳಲಾಯಿತು. ಇದರ ಮಧ್ಯೆ ಒಗ್ಗುಡೋಲು ಕಲಾವಿದರ ವೇಷಭೂಷಣಗಳು ಮತ್ತು ಪ್ರದರ್ಶನಗಳು ಆಕರ್ಷಕವಾಗಿದ್ದವು. ರಾಷ್ಟ್ರಧ್ವಜ ಹೊತ್ತ ಕಲಾವಿದರು ಅದ್ಭುತ ಪ್ರದರ್ಶನ ನೀಡಿದ್ದು, ಏಷ್ಯಾ ಖಂಡದ ಸ್ಪರ್ಧಿಗಳನ್ನು ಸ್ವಾಗತಿಸಿದರು.

WhatsApp Group Join Now
Telegram Group Join Now
Share This Article