ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಪ್ರಯಾಣಿಕರ ಬಸ್ ಮೇಲೆ ಭಯೋತ್ಪಾದಕ ದಾಳಿ ನಡೆದು 10 ಮಂದಿ ಯಾತ್ರಿಕರ ಸಾವಿಗೆ ಕಾರಣವಾದ ಭಯೋತ್ಪಾದಕರನ್ನು ಪತ್ತೆಹಚ್ಚಲು ಭದ್ರತಾ ಪಡೆಗಳು ಸೋಮವಾರ ಪ್ರದೇಶಗಳನ್ನು ಸುತ್ತುವರೆದು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಪ್ರದೇಶ ಮತ್ತು ದೆಹಲಿಯಿಂದ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ನಿನ್ನೆ ಭಾನುವಾರ ಸಂಜೆ ಭಯೋತ್ಪಾದಕರ ಹೊಂಚುದಾಳಿ ನಂತರ ಆಳವಾದ ಕಮರಿಗೆ ಉರುಳಿತು.
ಶಿವ ಖೋರಿ ದೇವಸ್ಥಾನದಿಂದ ಮಾತಾ ವೈಷ್ಣೋ ದೇವಿ ದೇಗುಲಕ್ಕೆ ಪೋನಿ ಪ್ರದೇಶದ ತೆರ್ಯಾತ್ ಗ್ರಾಮದ ಬಳಿ ಕತ್ರಾ ಮಾರ್ಗವಾಗಿ ತೆರಳುತ್ತಿದ್ದಾಗ 53 ಆಸನಗಳ ಬಸ್ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದರು. ಗುಂಡಿನ ದಾಳಿಗೆ ಬಸ್ ಚಾಲಕ ಸಮತೋಲನ ಕಳೆದುಕೊಂಡು ಪಕ್ಕದ ಆಳವಾದ ಕಂದಕಕ್ಕೆ ಉರುಳಿತು.
ಭಾರತೀಯ ಸೇನೆ, ಪೊಲೀಸ್ ಮತ್ತು ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (CRPF) ಸೇರಿದಂತೆ ಭದ್ರತಾ ಪಡೆಗಳು ರಾಜೌರಿ ಜಿಲ್ಲೆಯ ಗಡಿಯಲ್ಲಿರುವ ತೆರಿಯಾತ್-ಪೋನಿ-ಶಿವ್ ಖೋರಿ ಪ್ರದೇಶದಲ್ಲು ಸುತ್ತುವರೆದು ಶೋಧಕಾರ್ಯ ನಡೆಸುತ್ತಿವೆ. ಡ್ರೋನ್‌ಗಳು ಮತ್ತು ಸ್ನಿಫರ್ ಡಾಗ್‌ಗಳು ಸೇರಿದಂತೆ ಕಣ್ಗಾವಲು ಉಪಕರಣಗಳೊಂದಿಗೆ ಶಸ್ತ್ರಸಜ್ಜಿತರಾಗಿದ್ದಾರೆ ಎಂದು ಹೇಳಿದರು. ಜಿಲ್ಲೆಯ ಪ್ರದೇಶ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ಬೃಹತ್ ಶೋಧ ಕಾರ್ಯಾಚರಣೆ ಆರಂಭವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.