ಮುದಬಿಹಾಳ,ಸೆ.೦೨: ತಾಲೂಕಿನ ತಂಗಡಗಿ ಗ್ರಾಮದ ೯೦-೧೦೦ ಮೀಟರ್‌ನಷ್ಟು ಬಾಕಿ ಉಳಿದಿರುವ ರಸ್ತೆಯನ್ನು ರಾಜ್ಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣ ಮತ್ತು ಯುವಜನ ಸೇನೆ ಸಂಘಟನೆ ನೇತೃತ್ವದಲ್ಲಿ ಮಂಗಳವಾರ ಇಲ್ಲಿನ ಇಲ್ಲಿನ ಪೆಟ್ರೋಲ್ ಬಂಕ್ ತಿರುವಿನಲ್ಲಿ ನಡೆದ ಧರಣಿ ಸತ್ಯಾಗ್ರಹ ಕರ್ನಾಟಕ ರಸ್ತೆ ಅಭಿವೃಧ್ದಿ ನಿಗಮ ನಿಯಮಿತದ (ಕೆಆರ್‌ಡಿಸಿಎಲ್)ನ ಕಾರ್ಯಪಾಲಕ ಅಭಿಯಂತರ ಪ್ರವೀಣ ಹುಲಜಿ ನೀಡಿದ ಲಿಖಿತ ಭರವಸೆ ಮೇರೆಗೆ ಅಂತ್ಯಗೊಂಡಿತು.
ಧರಣಿ ನೇತೃತ್ವ ವಹಿಸಿದ್ದ ಕರವೇ ಅಧ್ಯಕ್ಷ ಸಂಗಯ್ಯ ಸಾರಂಗಮಠ, ಸೇನೆ ರಾಜ್ಯಾಧ್ಯಕ್ಷ ಶಿವಾನಂದ ವಾಲಿ ಅವರು ಮಾತನಾಡಿ, ಜನಹಿತಾಸಕ್ತಿಯಿಂದ ಧರಣಿ ನಡೆಸಲಾಗುತ್ತಿದೆ. ವಾಹನ ಸವಾರರಿಗೆ, ಜನರಿಗೆ ಸಾಕಷ್ಟು ತೊಂದರೆ ತಂದೊಡ್ಡಿರುವ ಈ ರಸ್ತೆ ಮೇಲ್ದರ್ಜೆಗೇರಿಸಲು ಹಲವು ಬಾರಿ ಮನವಿ ಸಲ್ಲಿಸಿದ, ಹೋರಾಟ ನಡೆಸಿದ್ದರೂ ಸ್ಪಂಧನೆ ದೊರೆತಿಲ್ಲ. ಈ ಬಾರಿ ಸಂಬಂಧಿಸಿದವರು ಸ್ಥಳಕ್ಕೆ ಬಂದು ಚರ್ಚಿಸಿ ಲಿಖಿತ ಭರವಸೆ ನೀಡುವವರೆಗೂ ಧರಣಿ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ಹುನಗುಂದ-ಮುದ್ದೇಬಿಹಾಳ-ತಾಳಿಕೋಟೆ ರಾಜ್ಯ ಹೆದ್ದಾರಿ ವಿಶ್ವ ಬ್ಯಾಂಕ್ ಆರ್ಥಿಕ ನೆರವಿನಲ್ಲಿ ಅಭಿವೃದ್ದಿಯಾಗಿದೆ. ಆದರೆ ತಂಗಡಗಿಯ ಪೆಟ್ರೋಲ್ ಬಂಕ್ ತಿರುವಿನಲ್ಲಿ ಮಾತ್ರ ೯೦-೧೦೦ ಮೀಟರ್‌ನಷ್ಟು ಮೊದಲಿನಂತೆ ಕಚ್ಚಾ ರಸ್ತೆಯಾಗಿಯೇ ಉಳಿದುಕೊಂಡಿದೆ. ಇವುಗಳಿಗೆ ಪರಿಹಾರವನ್ನು ನೀಡಿದ್ದರೂ ಸೂಕ್ತ ಜಾಗ ತೋರಿಸಿ ಮನೆ ಕಟ್ಟಿಕೊಟ್ಟಿಲ್ಲದ ಕಾರಣ ನಿವಾಸಿಗಳು ಮನೆ ತೆರವಿಗೆ ಮುಂದಾಗಿಲ್ಲ. ಇದರಿಂದಾಗಿ ರಸ್ತೆ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಲ್ಲ ಎಂದು ತಿಳಿಸಿದರು.
ಬಹುಹೊತ್ತಿನ ಚರ್ಚೆ, ವಾಗ್ವಾದದ ಬಳಿಕ ಧರಣಿ ನಿರತರ ಬೇಡಿಕೆಯಂತೆ ಪ್ರವೀಣ ಅವರು ಲಿಖಿತ ಭರವಸೆ ಪತ್ರವನ್ನು ಧರಣಿನಿರತರಿಗೆ ನೀಡಿದರು. ಇದಕ್ಕೂ ಮುನ್ನ ಮೋಬೈಲ್ ಫೋನ್ ಮೂಲಕ ತಹಶೀಲ್ದಾರ್ ಅವರೊಂದಿಗೆ ಮಾತನಾಡಿ ಸಮಸ್ಯೆಯನ್ನು ಅವರ ಗಮನಕ್ಕೆ ತಂದರು.
೩೧ ಮನೆಗಳು ಬಾಧಿತಗೊಳ್ಳುತ್ತವೆ. ಇವುಗಳಿಗೆ ೨.೪೦ ಕೋಟಿ ಪರಿಹಾರವನ್ನು ವಿತರಿಸಲಾಗಿದೆ. ಇವರಿಗೆ ಪ್ರತ್ಯೇಕ ಬಡಾವಣೆ ನಿರ್ಮಿಸಲು ಗ್ರಾಪಂನ ಸರ್ವೆ ನಂಬರ್ ೧೨೪/೧ರಲ್ಲಿ ಎರಡು ಎಕರೆ ಜಮೀನನ್ನು ಜಿಲ್ಲಾಧಿಕಾರಿಯವರು ಮಂಜೂರು ಮಾಡಿದ್ದಾರೆ.
ಬಡಾವಣೆಯ ನಕ್ಷೆ (ಲೇಔಟ್) ಅನುಮೋದನೆಗೆ ತಾಪಂ ಇಓ ಅವರ ಮೂಲಕ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿದೆ. ೨ ಎಕರೆ ಜಮೀನನ್ನು ಶೀಘ್ರ ಸರ್ವೆ ಮಾಡಿಸಿ ಹದ್ದುಬಸ್ತು ಮಾಡಿ ನಿಗಮಕ್ಕೆ ಹಸ್ತಾಂತರಿಸಿ ಬಡಾವಣೆಯ ಬಾಧಿತ ಕಟ್ಟಡಗಳ ಮಾಲಿಕರಿಗೆ ನಿಯಮಾನುಸಾರ ನಿವೇಶನ ವಿತರಿಸಲು ಶೀಘ್ರ ಕ್ರಮ ಕೈಕೊಳ್ಳಲಾಗುತ್ತದೆ. ಕಟ್ಟಡ ನಿರ್ಮಾಣ ವಿಷಯದಲ್ಲಿ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಸರ್ಕಾರದ ನಿಯಮಾವಳಿ, ಸುತ್ತೋಲೆಯಂತೆ ಪುರ್ಣಗೊಳಿಸಲು ಕ್ರಮ ಕೈಕೊಲ್ಳಲಾಗುತ್ತದೆ ಎಂದು ಲಿಖಿತ ಭರವಸೆಯಲ್ಲಿ ತಿಳಿಸಲಾಗಿದೆ.
ಎಇಇ ಸಿ.ಯು.ಹರ್ಲಾಪೂರ, ಎಇ ಸುಧೀರ ಮೇತ್ರಿ, ಪಿಎಸೈ ಸಂಜಯ್ ತಿಪ್ಪರಡ್ಡಿ, ಕಂದಾಯ ನಿರೀಕ್ಷಕ ಪವನ್ ತಳವಾರ, ಗ್ರಾಪಂ ಕಾರ್ಯದರ್ಶಿ ಪಿ.ವೈ.ಚಲವಾದಿ ಇನ್ನಿತರರು ಇದ್ದರು.
ಗಂಗು ಗಡ್ಡಿ, ಮಹಾಂತೇಶ ಪಡಶೆಟ್ಟಿ, ಮಹ್ಮದರಫೀಕ ತೆಗ್ಗಿನಮನಿ, ಸಂಗಣ್ಣ ಪ್ಯಾಟಿ, ಚರಲಿಂಗಪ್ಪ ಕಮಲಾಪುರ, ನಾಗರಾಜ ಅಗಸಿಮುಂದಿನ, ಗುರುರಾಜ ಕುಲಕರ್ಣಿ, ಪ್ರಕಾಶ ಹಂದ್ರಾಳ, ಮಂಜು ಪೂಜಾರಿ, ಮರಸಂಗಯ್ಯ ಪರೂತಿಮಠ, ಚಂದ್ರು ಹಡಪದ, ಚನ್ನಬಸ್ಸು ಹಿರೇಮಠ, ಹುಲ್ಲಪ್ಪ ವಡ್ಡರ, ಶಿವಾನಂದ ದೇವರಮನಿ, ಪರಶುರಾಮ ವಡ್ಡರ, ಸಿದ್ದಣ್ಣ ಹೊಳಿ, ಸಂಗಪ್ಪ ಹೊಳಿ, ಮಂಜುನಾಥ ದೇವರಮನಿ, ವೀರೇಶ ಆಲಕೊಪ್ಪರ, ಚನ್ನವೀರಪ್ಪ ಮಮ್ಮದಕೋಟಿ ಇನ್ನಿತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಗಯ್ಯ, ಶಿವಾನಂದ ಅವರು ಲಿಖಿತ ಭರವಸೆಯಂತೆ ಬೇಡಿಕೆ ಈಡೇರದೇ ಹೋದಲ್ಲಿ ಮುಂದಿನ ಬಾರಿ ಹೋರಾಟವನ್ನು ಉಗ್ರಗೊಳಿಸಲಾಗುತ್ತದೆ ಎಂದು ತಿಳಿಸಿದರು.
ವಾರದೊಳಗೆ ಪರಿಹಾರದ ಭರವಸೆ: ಧರಣಿ ತಾತ್ಕಾಲಿಕ ಹಿಂತೆಗೆತ
