ಬೆಂಗಳೂರು: ಟೆಲಿಫೋನ್ ಕದ್ದಾಲಿಕೆ ಪ್ರಕರಣ ಸಂಬಂಧಿಸಿದಂತೆ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ವಿರುದ್ಧ ನಡೆಯುತ್ತಿರುವ ಇಲಾಖಾ ತನಿಖೆ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಅವರು ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ (CAT) ಮುಂದೆ ಸಲ್ಲಿಸಿದ ಅರ್ಜಿಯ ವಿಚಾರಣೆ ಮಹತ್ವದ ತಿರುವು ಪಡೆದುಕೊಂಡಿದೆ. ಟೆಲಿಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಸಿಬಿಐ ಈಗಾಗಲೇ ‘ಬಿ ರಿಪೋರ್ಟ್’ ಸಲ್ಲಿಸಿ ಯಾವುದೇ ಕ್ರಿಮಿನಲ್ ಪ್ರಕರಣ ಸ್ಥಾಪಿಸಲು ಸಾಧ್ಯವಿಲ್ಲವೆಂದು ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಲಾಖಾ ತನಿಖೆಯನ್ನು ಕೈಬಿಡಲು ತೀರ್ಮಾನಿಸಿದ್ದರು. ಆದರೆ ಇಲಾಖಾ ವಿಚಾರಣೆ ಕೈಬಿಡುವ ಅಧಿಕೃತ ಆದೇಶ ಪ್ರಕಟವಾಗಿರಲಿಲ್ಲ.
ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಇಲಾಖಾ ವಿಚಾರಣೆಯನ್ನು ಮುಂದುವರಿಸಲು ನಿರ್ಧರಿಸಿತು. ಇಲಾಖಾ ವಿಚಾರಣೆಗೆ ಸಂಬಂಧಿಸಿದಂತೆ ನೀಡಲಾದ ನೋಟಿಸ್ನ್ನು ಪ್ರಶ್ನಿಸಿ ಅಲೋಕ್ ಕುಮಾರ್ CAT ಗೆ ಅರ್ಜಿ ಸಲ್ಲಿಸಿದ್ದರು.
ಇಲಾಖಾ ವಿಚಾರಣೆಯಿಂದಾಗಿ ಅಲೋಕ್ ಕುಮಾರ್ ಅವರ ಮುಂಬಡ್ತಿ (Promotion) ಕೂಡಾ ಬಾಕಿ ಉಳಿದಿದೆ. ಇಲಾಖಾ ವಿಚಾರಣೆ ಪೂರ್ಣಗೊಳ್ಳದೆ ಇರುವ ಕಾರಣ, ಅವರ ಸೇವಾ ಪ್ರಗತಿ ಸ್ಥಗಿತಗೊಂಡಿದೆ.
ಪ್ರಸ್ತುತ ಮಧ್ಯಂತರ ತಡೆಯಾಜ್ಞೆ ಮುಂದುವರಿದಿದ್ದು, ಇಲಾಖಾ ತನಿಖೆ ತಾತ್ಕಾಲಿಕವಾಗಿ ನಿಂತಿದೆ. ಪ್ರಕರಣವನ್ನು ಈಗ ಮೂರನೇ ನ್ಯಾಯಾಧೀಶರು ಪರಿಶೀಲಿಸಲಿದ್ದು, ಅಂತಿಮ ತೀರ್ಪು ಹೊರಬರುವವರೆಗೆ ನಿರೀಕ್ಷೆಯಾಗಿದೆ. ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 11ಕ್ಕೆ ಮುಂದೂಡಲಾಗಿದೆ.