ನವದೆಹಲಿ: ರಷ್ಯಾ ಮೂಲದ ಖ್ಯಾತ ಸಾಮಾಜಿಕ ಜಾಲತಾಣ Telegram ಭಾರತದಲ್ಲಿ ನಿಷೇಧಕ್ಕೊಳಗಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಹೌದು.. ಮನಿಕಂಟ್ರೋಲ್‌ನಲ್ಲಿನ ವರದಿಯ ಪ್ರಕಾರ, ಟೆಲಿಗ್ರಾಮ್ ವಿರುದ್ಧ ಕೇಳಿಬಂದಿರುವ ಈ ಆರೋಪಗಳು ಸಾಬೀತಾದರೆ ಭಾರತದಲ್ಲಿ ಟೆಲಿಗ್ರಾಂ ನಿಷೇಧವಾಗುವ ಎಲ್ಲ ಸಾಧ್ಯತೆಗಳಿವೆ. ವರದಿಯಲ್ಲಿರುವಂತೆ ಟೆಲಿಗ್ರಾಂ ಆ್ಯಪ್ ಬಳಕೆ ಮಾಡಿಕೊಂಡು ಸುಲಿಗೆ ಮತ್ತು ಜೂಜಾಟದಂತಹ ಕ್ರಿಮಿನಲ್ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ.
ದುಷ್ಕರ್ಮಿಗಳು ತಮ್ಮ ಕಾನೂನು ಬಾಹಿರ ಚುಟುವಟಿಕೆಗಳನ್ನು ನಡೆಸಲು ಟೆಲಿಗ್ರಾಂ ವೇದಿಕೆಯಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬರುತ್ತಿದ್ದು, ಇದು ಸಾಬೀತಾದರೆ ಟೆಲಿಗ್ರಾಂ ಆ್ಯಪ್ ಅನ್ನು ಭಾರತದಲ್ಲಿ ನಿಷೇಧ ಮಾಡುವ ಸಾಧ್ಯತೆ ಇದೆ.
ಈಗಾಗಲೇ ಭಾರತ ಸರ್ಕಾರ ಈ ಸಂಬಂಧ ಹೆಚ್ಚಿನ ಪರಿಶೀಲನೆಯಲ್ಲಿ ತೊಡಗಿದ್ದು, ಭಾರತ ಸರ್ಕಾರವು ಸಹ ವೇದಿಕೆಯ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದೆ. ಈ ಸಂಬಂದ ತಜ್ಞರ ವರದಿ ಮತ್ತು ತನಿಖಾಧಿಕಾರಿಗಳ ಅಭಿಪ್ರಾಯದ ಮೇರೆಗೆ ನಿಷೇಧ ಹೇರುವ ಸಾಧ್ಯತೆಯಿದೆ.
ಭಾರತ ಸರ್ಕಾರದ ತನಿಖೆಯನ್ನು ಗೃಹ ವ್ಯವಹಾರಗಳ ಸಚಿವಾಲಯ (MHA) ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ನಡೆಸುತ್ತಿದೆ. ಸುಲಿಗೆ ಮತ್ತು ಜೂಜಾಟದಂತಹ ಕಾನೂನುಬಾಹಿರ ಚಟುವಟಿಕೆಗಳಿಗೆ ಟೆಲಿಗ್ರಾಮ್ ಅನ್ನು ಹೇಗೆ ಬಳಸಲಾಗಿದೆ ಎಂಬುದರ ಕುರಿತು ಅಧಿಕಾರಿಗಳು ವಿಶೇಷವಾಗಿ ಆಸಕ್ತಿ ಹೊಂದಿದ್ದಾರೆ. ನಿಷೇಧವನ್ನು ತಳ್ಳಿಹಾಕದಿದ್ದರೂ, ಅಂತಿಮ ನಿರ್ಧಾರವು ತನಿಖೆಯ ಫಲಿತಾಂಶವನ್ನು ಅವಲಂಬಿಸಿರುತ್ತದೆ ಎಂದು ಹೇಳಿದ್ದಾರೆ.