ನವದೆಹಲಿ: ಬಿಹಾರದ ಮದ್ಯ ನಿಷೇಧ ಕಾನೂನು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಸಾಂಸ್ಥಿಕ ಭ್ರಷ್ಟಾಚಾರಕ್ಕೆ ಒಂದು ಸಣ್ಣ ಉದಾಹರಣೆಯಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಶುಕ್ರವಾರ ವಾಗ್ದಾಳಿ ನಡೆಸಿದ್ದಾರೆ. ಕಲಬೆರಕೆ ಸಾರಾಯಿ ಸೇವನೆಯ ಎರಡು ಪ್ರತ್ಯೇಕ ಘಟನೆಗಳಲ್ಲಿ 33 ಜನ ಸಾವಿಗೀಡಾದ ನಂತರ ತೇಜಸ್ವಿ ಯಾದವ್ ಸಿಎಂ ನಿತೀಶ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಯಾದವ್, “ಮದ್ಯ ನಿಷೇಧವು ನಿತೀಶ್ ಕುಮಾರ್ ಅವರ ಸಾಂಸ್ಥಿಕ ಭ್ರಷ್ಟಾಚಾರಕ್ಕೆ ಒಂದು ಸಣ್ಣ ಉದಾಹರಣೆಯಾಗಿದೆ. ಮದ್ಯ ನಿಷೇಧ ಕಾನೂನು ಮಾಡಿದರೆ ಅದನ್ನು ಸಂಪೂರ್ಣವಾಗಿ ಜಾರಿಗೆ ತರುವುದು ಸರ್ಕಾರದ ಜವಾಬ್ದಾರಿಯಾಗಿದೆ. ಆದರೆ, ಮುಖ್ಯಮಂತ್ರಿಗಳ ಸೈದ್ಧಾಂತಿಕ ಮತ್ತು ನೀತಿಯಲ್ಲಿನ ಅಸ್ಪಷ್ಟತೆ, ದುರ್ಬಲ ಇಚ್ಛಾಶಕ್ತಿ ಮತ್ತು ಸಾರ್ವಜನಿಕ ಪ್ರತಿನಿಧಿಗಳ ಬದಲು ಆಯ್ದ ಅಧಿಕಾರಿಗಳ ಮೇಲಿನ ಅವಲಂಬನೆಯಿಂದಾಗಿ ಮದ್ಯ ನಿಷೇಧವು ಇಂದು ಬಿಹಾರದಲ್ಲಿ ಸೂಪರ್ ಫ್ಲಾಪ್ ಆಗಿದೆ.
ಆಡಳಿತಾರೂಢ ರಾಜಕಾರಣಿಗಳು-ಪೊಲೀಸರು ಮತ್ತು ಮದ್ಯ ಮಾಫಿಯಾದ ಅಪವಿತ್ರ ಸಂಬಂಧದಿಂದಾಗಿ, ಬಿಹಾರದಲ್ಲಿ 30 ಸಾವಿರ ಕೋಟಿಗೂ ಹೆಚ್ಚು ಮೌಲ್ಯದ ಅಕ್ರಮ ಮದ್ಯದ ಕಪ್ಪು ಮಾರುಕಟ್ಟೆ ಪ್ರವರ್ಧಮಾನಕ್ಕೆ ಬಂದಿದೆ.” ಎಂದು ಹೇಳಿದ್ದಾರೆ.