ಬೆಂಗಳೂರು, ಅಕ್ಟೋಬರ್ 30: ಕರ್ನಾಟಕದಲ್ಲಿ ವಕ್ಫ್ ಮಂಡಳಿಯಿಂದ ರೈತರಿಗೆ ನೋಟಿಸ್ ನೀಡಿರುವ ವಿಚಾರ ತೀವ್ರ ಚರ್ಚೆಗೆ ಮತ್ತು ಪ್ರತಿಭಟನೆಗೆ ಗ್ರಾಸವಾದ ಬೆನ್ನಲ್ಲೇ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಆ ಬಗ್ಗೆ ಮಧ್ಯ ಪ್ರವೇಶಿಸಿದ್ದಾರೆ. ವಕ್ಫ್ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್ಗೆ ಪತ್ರ ಬರೆದಿರುವ ತೇಜಸ್ವಿ ಸೂರ್ಯ, ಸಮಿತಿಯ ಮುಂದೆ ಸಾಕ್ಷಿಗಳಾಗಿ ರೈತರ ನಿಯೋಗವನ್ನು ಆಹ್ವಾನಿಸಬೇಕೆಂದು ಮನವಿ ಮಾಡಿದ್ದಾರೆ.
ಕರ್ನಾಟಕ ರೈತರ ಅಹವಾಲು ಆಲಿಸಲು ಜಂಟಿ ಸಂಸದೀಯ ಸಮಿತಿಗೆ ತೇಜಸ್ವಿ ಸೂರ್ಯ ಪತ್ರ
ಈ ವಿಚಾರವಾಗಿ ತಾವು ಬರೆದಿರುವ ಪತ್ರ ಮತ್ತು ಅದಕ್ಕೆ ಸಂಬಂಧಿಸಿದ ವಿವರನ್ನು ತೇಜಸ್ವಿ ಸೂರ್ಯ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ.
ವಕ್ಫ್ ತಿದ್ದುಪಡಿ ಮಸೂದೆಗೆ ಸಂಬಂಧಿಸಿದ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್ ಜಿ ಅವರಿಗೆ ಪತ್ರ ಬರೆದು, ವಿಜಯಪುರ ಜಿಲ್ಲೆ ಮತ್ತು ಕರ್ನಾಟಕದ ಸುತ್ತಮುತ್ತಲಿನ ಇತರ ಪ್ರದೇಶಗಳ ರೈತರಿಗೆ ಅವರ ಭೂಮಿಯನ್ನು ವಕ್ಫ್ ಆಸ್ತಿ ಎಂದು ತಪ್ಪಾಗಿ ನೋಟಿಸ್ ನೀಡಿರುವುದರ ಬಗ್ಗೆ ಗಮನ ಸೆಳೆಯಲಾಗಿದೆ ಎಂದು ಎಕ್ಸ್ ಸಂದೇಶದಲ್ಲಿ ತೇಜಸ್ವಿ ಸೂರ್ಯ ಉಲ್ಲೇಖಿಸಿದ್ದಾರೆ.