ಬಳ್ಳಾರಿ. ಸೆ. 22: ಹೊಸಪೇಟೆ ರಸ್ತೆಯ ವಿನಾಯಕ ನಗರದಲ್ಲಿರುವ ದಾರದ ಮಿಲ್ ಪ್ರದೇಶ ಇಲ್ಲಿ ಜೋಪಡಿಗಳಲ್ಲಿ ವಾಸಿಸುತ್ತಿರುವ ನೂರಾರು ಕುಟುಂಬಗಳು ಕಳೆದ ಮೂರು ದಶಕಗಳಿಂದ ತಮ್ಮ ಜೀವನವನ್ನು ಕಟ್ಟಿಕೊಂಡಿವೆ. ಗಾರೆ ಹೊರುವ ಕೈಗಳು, ಹಮಾಲಿ, ಆಟೋ ಚಾಲಕರಾಗಿ ಕೆಲಸದಲ್ಲಿ ಬೆವರು ಸುರಿಸುವ ಬೆನ್ನುಗಳು, ದಿನಗೂಲಿ ಕೂಲಿ ಮಾಡಿ ಬಡತನದ ಬದುಕನ್ನು ಸಾಗಿಸುತ್ತಿರುವವರು. ಆದರೆ ಇಂದು, ಆ ಕುಟುಂಬಗಳ ತಲೆಯ ಮೇಲೆ ಇರುವ ಏಕೈಕ ನೆರಳು ಅವರ ಜೋಪಡಿ ಮನೆ ಸ್ಥಳೀಯ ಆಡಳಿತದ ನಿರ್ಧಾರದಿಂದ ನೆಲಸಮವಾಗುವ ಅಂಚಿನಲ್ಲಿದೆ.
ಪಾಲಿಕೆ ಅಧಿಕಾರಿಗಳು ಅಕ್ರಮ ನಿರ್ಮಾಣಗಳ ಹೆಸರಿನಲ್ಲಿ ತೆರವು ಕಾರ್ಯಕ್ಕೆ ಮುಂದಾಗಿರುವ ಹಿನ್ನೆಲೆಯಲ್ಲಿ, ದಾರದ ಮಿಲ್ ನಿವಾಸಿಗಳು ತೀವ್ರ ಆತಂಕಕ್ಕೊಳಗಾಗಿದ್ದಾರೆ. “ನಮ್ಮ ಮಕ್ಕಳಿಗೆ ಶಾಲೆ, ಬದುಕಿಗೆ ಕಾಯಕ ಎಲ್ಲವೂ ಇಲ್ಲೇ ಕಟ್ಟಿಕೊಂಡಿದ್ದೇವೆ. ಈಗ ಜೋಪಡಿ ತೆಗೆದರೆ ನಾವು ಬೀದಿಗೇ ಬೀಳಬೇಕು. ಸರ್ಕಾರವೇ ನಮಗೆ ಪರ್ಯಾಯ ಆಶ್ರಯ ಕಲ್ಪಿಸಬೇಕೆಂದು ಈ ಸಂದರ್ಭದಲ್ಲಿ ಸ್ಥಳೀಯ ಆಡಳಿತವನ್ನು ಒತ್ತಾಯಿಸಿದರು.
ನಗರಾಭಿವೃದ್ಧಿಯ ಹೆಸರಿನಲ್ಲಿ ಬಡವರ ಮನೆಗಳನ್ನು ತೆರವು ಮಾಡುವುದು ಹೊಸದಲ್ಲ. ಆದರೆ ಕಳೆದ 30 ವರ್ಷಗಳಿಂದ ನೆಲೆಸಿರುವ ಜನರಿಗೆ ಪುನರ್ವಸತಿ ನೀಡದೇ ತೆರವು ಮಾಡುವ ಕ್ರಮ ಖಂಡನೀಯ ಎಂದರು. ಸಮಾಜದ ತಳಹದಿಯಲ್ಲಿ ದಿನಗೂಲಿ ಕೆಲಸದಿಂದ ಜೀವನ ಸಾಗಿಸುವ ಈ ಕುಟುಂಬಗಳಿಗೆ “ಮನೆ” ಎಂಬ ಪದ ಕೇವಲ ಕನಸು. ಆಡಳಿತದ ನಿರ್ಲಕ್ಷ್ಯದಿಂದ ಆ ಕನಸು ಈಗ ನಾಶವಾಗುವ ಭೀತಿ ಎದುರಾಗಿದೆ ಎಂದು
ನಿವಾಸಿಗಳ ಆಕ್ರೋಶ – “ನಮ್ಮ ತಲೆಮಾರುಗಳ ಬದುಕು ಇದೇ ಜಾಗದಲ್ಲಿ ಸಾಗುತ್ತಿದೆ. ಆಸ್ತಿಪಾಸ್ತಿ ಇಲ್ಲ, ಮನೆಮಠ ಇಲ್ಲ. ಈಗ ಗುಡಿಸಲು ತೆಗೆದರೆ ನಾವು ಎಲ್ಲಿಗೆ ಹೋಗುವುದು? ಪರ್ಯಾಯ ವ್ಯವಸ್ಥೆ ಮಾಡಿದ ನಂತರ ಮಾತ್ರ ತೆರವು ಮಾಡಿ” ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.


