ಬಳ್ಳಾರಿ ಜೂ 05.: ಕನ್ನಡ ಭಾಷೆಯ ಬಗ್ಗೆ ತಮಿಳು ನಟ ಕಮಲ್ ಹಾಸನ್ ನೀಡಿರುವ ಅವಮಾನಕರ ಹೇಳಿಕೆಯನ್ನು ಖಂಡಿಸಿ ಇಂದು ನಗರದ ಗಡಿಗಿ ಚೆನ್ನಪ್ಪ ವೃತ್ತದಲ್ಲಿ ನಟ ಕಮಲಹಾಸನ್ ಅವರ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಪ್ರತಿ ಕೃತಿಯನ್ನು ದಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ಆಕ್ರೋಶವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಮಲಹಾಸನ್ ವಿರುದ್ಧ ಘೋಷಣೆಗಳನ್ನು ಕೂಗಿ ಜಿಲ್ಲಾಧ್ಯಕ್ಷ ವಿ ಎಚ್ ಹುಲುಗಪ್ಪ ಮಾತನಾಡಿ, ಕಮಲ್ ಹಾಸನ್ ಒಳ್ಳೆಯ ನಟ ಇರಬಹುದು ಆದರೆ ಅವರಿಗೆ ಸಮಾಜದಲ್ಲಿ ಹೇಗೆ ನಡೆದುಕೊಳ್ಳಬೇಕೆಂಬ ಸಂಸ್ಕಾರವಿಲ್ಲ ಒಂದು ಭಾಷೆಯ ಸಮುದಾಯಕ್ಕೆ ನೋವುಂಟು ಮಾಡಿ ಸಂತಸ ಪಡುವ ವಿಕೃತಿ ಮನೋಭಾವವನ್ನು ಕಮಲ್ ಹಾಸನ್ ಹೊಂದಿದ್ದಾರೆ ಅವರ ವಿಕೃತಿ ಮನೋಭಾವದಿಂದ ಹೊರಬಂದು ಕನ್ನಡಿಗರ ಕ್ಷಮೆ ಕೇಳಬೇಕು, ಇಲ್ಲವಾದಲ್ಲಿ ತನ್ನ ನಟನೆಯ ಥಗ್ ಲೈಫ್ ಚಿತ್ರವನ್ನು ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಕಮಲಾಸನ್ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದರು.
ಕರವೇ ಪ್ರವೀಣ್ ಶೆಟ್ಟಿ ಬಣದ ರಾಜ್ಯ ಸಂಚಾಲಕ ಅದ್ದಿಗೇರಿ ರಾಮಣ್ಣ ಮಾತನಾಡಿ, ಕಮಲ ಹಾಸನ್ ಅವರಿಗೆ ರಾಜ್ಯ ಉಚ್ಚ ನ್ಯಾಯಾಲಯ ಕೂಡ ಭಾಷೆ ಭಾಷೆ ರಾಜ್ಯ ರಾಜ್ಯಗಳ ಮಧ್ಯ ಕಲಹವನ್ನು ಸೃಷ್ಟಿಸುವ ಈ ರೀತಿಯ ಹೇಳಿಕೆಗಳನ್ನು ಯಾರು ನೀಡಬಾರದು ಕಮಲ್ ಹಾಸನ್ ಕ್ಷಮೆ ಕೇಳುವುದು ಒಳಿತು ಎಂದು ತಾಕೀತು ಮಾಡಿದೆ, ಆದರೂ ಸಹ ಕಮಲಹಾಸನ್ ಕ್ಷಮೆ ಕೇಳದೆ ತನ್ನ ಮೊಂಡು ಬುದ್ಧಿಯನ್ನು ಪ್ರದರ್ಶಿಸುತ್ತಿದ್ದಾರೆ ಕೂಡಲೇ ಕನ್ನಡಿಗರ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು.
ನಂತರ ಜಿಲ್ಲಾಧಿಕಾರಿಗಳ ಸ್ಥಾನಿಕ ಅಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಆನಂದ್ ಕೋಳೂರು, ವೀರಾರೆಡ್ಡಿ ಹಾಗೂ ಜಿಲ್ಲಾ ಮತ್ತು ತಾಲೂಕ ಪದಾಧಿಕಾರಿಗಳು ಕಂಪ್ಲಿ ತಾಲೂಕ ಅಧ್ಯಕ್ಷ ರಮೇಶ್ ಸೇರಿದಂತೆ ಹಲವಾರು ಜನ ವೇದಿಕೆಯ ಕಾರ್ಯಕರ್ತರಿದ್ದರು.


