ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ರಮೇಶ್ ಕತ್ತಿ ನೇತೃತ್ವದ ಬಣ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಮಾಜಿ ಸಂಸದ ಅಣ್ಣಸಾಬ್ ಜೊಲ್ಲೆ ಪ್ಯಾನೆಲ್ಗೆ ತೀವ್ರ ಹಿನ್ನಡೆಯಾಗಿದೆ.
ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ರಮೇಶ್ ಕತ್ತಿ ಅವರ ಸ್ವಾಭಿಮಾನಿ ಪ್ಯಾನೆಲ್ 15 ನಿರ್ದೇಶಕರ ಸ್ಥಾನಗಳನ್ನು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದೆ.
ಹುಕ್ಕೇರಿ ತಾಲೂಕಿನ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆಗೆ ಭಾನುವಾರ ಬೆಳಗ್ಗೆಯಿಂದ ಮತದಾನ ನಡೆದಿದ್ದು, ತಡರಾತ್ರಿ ಫಲಿತಾಂಶ ಹೊರಬಂದಿದೆ. ಒಟ್ಟು 15 ಜನ ನಿರ್ದೇಶಕರ ಸ್ಥಾನಕ್ಕೆ ನಡೆದಿದ್ದ ಚುನಾವಣೆಯಲ್ಲಿ 36 ಜನ ಸ್ಪರ್ಧಿಸಿದ್ದರು. ಆದರೆ ರಮೇಶ್ ಕತ್ತಿಯವರ ಪ್ಯಾನೆಲ್ನ ಎಲ್ಲ 15 ಜನರು ಜಯ ಸಾಧಿಸಿದ್ದಾರೆ.
ತೀವ್ರ ಜಿದ್ದಾಜಿದ್ದಿನಿಂದ ಕೂಡಿದ ಚುನಾವಣೆಯಲ್ಲಿ ಕಳೆದ ಒಂದು ತಿಂಗಳಿನಿಂದ ಹುಕ್ಕೇರಿ ತಾಲೂಕಿನಾದ್ಯಂತ ಭಾರೀ ಪ್ರಚಾರ ನಡೆದಿತ್ತು. ಈ ಚುನಾವಣೆ ಕತ್ತಿ, ಜಾರಕಿಹೊಳಿ, ಪಾಟೀಲ್ ಮತ್ತು ಜೊಲ್ಲೆ ಮನೆತನಗಳ ನಡುವಿನ ಪ್ರತಿಷ್ಠೆಯಾಗಿತ್ತು. ಇದರಿಂದ ಫಲಿತಾಂಶದ ಬಗ್ಗೆ ತೀವ್ರ ಕುತೂಹಲ ಮೂಡಿತ್ತು.
ತಡರಾತ್ರಿ ಫಲಿತಾಂಶ ಹೊರಬಂದಿದ್ದು ರಮೇಶ್ ಕತ್ತಿ ಮತ್ತು ಮಾಜಿ ಸಚಿವ ಎ.ಬಿ.ಪಾಟೀಲ್ ಬೆಂಬಲಿಗರು ಸಂಭ್ರಮಾಚರಣೆ ಮಾಡಿದ್ದಾರೆ. ಇನ್ನು ಸತೀಶ್ ಜಾರಕಿಹೊಳಿ ಮತ್ತು ಜೊಲ್ಲೆ ಮುಖಭಂಗ ಅನುಭವಿಸಿದ್ದಾರೆ.


