ನವದೆಹಲಿ: ಆಮ್ ಆದ್ಮಿ ಪಕ್ಷದ ರಾಜ್ಯಸಭೆ ಸಂಸದೆ ಸ್ವಾತಿ ಮಲಿವಾಲ್ ಮೇಲೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಬಿಭವ್ ಕುಮಾರ್ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಮತ್ತೊಂದು ತಿರುವು ಪಡೆದಿದೆ. ಬಿಭವ್ ಕುಮಾರ್ ವಿರುದ್ಧ ಮಲಿವಾಲ್ ಮಾಡಿರುವ ಈ ಆರೋಪವನ್ನು ಆಮ್ ಆದ್ಮಿ ಪಕ್ಷವು ಈಗಾಗಲೇ ಆಧಾರ ರಹಿತ ಎಂದು ತಳ್ಳಿಹಾಕಿದೆ. ಇದೀಗ ಎಎಪಿ ‘ಗೂಂಡಾಗಳ ಒತ್ತಡ’ಕ್ಕೆ ಮಣಿಯುತ್ತಿದೆ ಮತ್ತು ನನ್ನ ನಡವಳಿಕೆಯನ್ನೇ ಪ್ರಶ್ನಿಸಲಾಗುತ್ತಿದೆ ಎಂದು ಸ್ವಾತಿ ಮಲಿವಾಲ್ ಆರೋಪಿಸಿದ್ದಾರೆ.
ಮೇ 13ರಂದು ದೆಹಲಿ ಸಿಎಂ ನಿವಾಸದ ಕ್ಯಾಂಪ್ ಕಚೇರಿಗೆ ಭೇಟಿ ನೀಡಿದಾಗ ತನ್ನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಸ್ವಾತಿ ಮಲಿವಾಲ್ ಆರೋಪಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಿಭವ್ ಕುಮಾರ್ ಬಂಧನಕ್ಕೆ ಒಳಗಾಗಿ, ಐದು ದಿನಗಳ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಈಗ ಆಪ್ ವಿರುದ್ಧ ಮತ್ತಷ್ಟು ವಾಗ್ದಾಳಿ ಮುಂದುವರೆಸಿರುವ ಮಲಿವಾಲ್, ”ನಿನ್ನೆ ನನಗೆ ಪಕ್ಷದ ಹಿರಿಯ ನಾಯಕರಿಂದ ಕರೆ ಬಂದಿತ್ತು. ಸ್ವಾತಿ ವಿರುದ್ಧ ಕೊಳಕು ಮಾತನಾಡಬೇಕು ಎಂದು ಪಕ್ಷದ ಎಲ್ಲರ ಮೇಲೆ ಹೇಗೆ ಒತ್ತಡ ಇದೆ. ವೈಯಕ್ತಿಕ ಫೋಟೋಗಳನ್ನು ಹರಿಬಿಟ್ಟು ಆಕೆಯನ್ನು ಕುಗ್ಗಿಸಬೇಕು ಎಂಬ ತಂತ್ರ ನಡೆಯುತ್ತಿದೆ. ಯಾರೇ ಬೆಂಬಲಿಸಿದರೂ ಅವರನ್ನು ಪಕ್ಷದಿಂದ ಉಚ್ಚಾಟಿಸುವ ಬೆದರಿಕೆ ಹಾಕಲಾಗಿದೆ ಎಂಬುವುದಾಗಿ ಹೇಳಿದ್ದಾರೆ” ಎಂದು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.