ಗದಗ : ಜಗತ್ತಿನ ಪ್ರಥಮ ಸಾಹಿತ್ಯ ಎಂದರೆ ಅದು ಜನಪದ ಸಾಹಿತ್ಯ,
ಕಿವಿಯಿಂದ ಕಿವಿಗೆ ಹರಿದುಬರುವ ಮೂಲಕ ಜನರಲ್ಲಿ ಉತ್ತಮ ಹವ್ಯಾಸ, ಅಭಿವೃಚಿ, ಮೌಲ್ಯಗಳನ್ನು ಬೆಳೆಸುತ್ತ ರಚನಾತ್ಮಕ ಸಮಾಜ ಕಟ್ಟುವಲ್ಲಿ ಜನಪದ ಸಾಹಿತ್ಯ ಪ್ರಮುಖ ಪಾತ್ರ ವಹಿಸಿದೆ ಎಂದು ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಡಾ.ಸಿದ್ದರಾಮ ಮಹಾಸ್ವಾಮೀಜಿ ಹೇಳಿದರು.
ಅವರು ಸುತಾರ ಸಾಂಸ್ಕೃತಿಕ ಕಲಾ ಸಂಘದ ದಶಮಾನೋತ್ಸವ ಸಮಾರಂಭದ ಆತ್ಮಾರಾಮ ಸುತಾರ ವೇದಿಕೆಯಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮನುಷ್ಯನ ನಿಜವಾದ ಸೌಂದರ್ಯ ಅಂದರೆ ಅದು ಸಂಸ್ಕೃತಿ,
ಸಂಸ್ಕೃತಿಯಿಂದ ಮಾತ್ರ ಮನುಷ್ಯ ಮನುಷ್ಯನಾಗಿ ಬಾಳಲು ಸಾಧ್ಯ, ಅಂತಹ ಸಂಸ್ಕೃತಿಯನ್ನು ಸಾಂಸ್ಕೃತಿಕ ಕಾರ್ಯಕ್ರಮಗಳು ನೀಡುತ್ತವೆ, ಹೀಗಾಗಿ ಇಂದಿನ ಸಮಾಜದಲ್ಲಿ ಸಾಂಸ್ಕೃತಿಕ ವಾತಾವರಣ ನಿರ್ಮಾಣ ಮಾಡುವ ಅಗತ್ಯ ಇದೆ. ಸುತಾರ ಸಾಂಸ್ಕೃತಿಕ ಸಂಘವು ಕಳೆದ ಹತ್ತು ವರ್ಷಗಳಿಂದ ಬಯಲಾಟ, ದೊಡ್ಡಾಟ ಕಲೆಯ ಮೂಲಕ ನಮ್ಮ ಮೂಲ ಸಂಸ್ಕೃತಿ ಉಳಿಸುವ ಬೆಳೆಸುವ ಕೆಲಸ ಮಾಡುತ್ತಿದೆ. ಈ ಸಂಘ ಉತ್ತರೋತ್ತರ ಬೆಳೆಯಲಿ ಎಂದರು.
ಶಿರೋಳ ಭೈರನಟ್ಟಿಯ ಜ.ತೋಂಟದಾರ್ಯ ಶಾಖಾ ಮಠದ ಶ್ರೀ ಶಾಂತಲಿಂಗ ಮಹಾಸ್ವಾಮೀಜಿ ಮಾತನಾಡಿ, ರಾಮಾಯಣ, ಮಹಾಭಾರತ ಮುಂತಾದ ಪೌರಾಣಿಕ ಕಥಾವಸ್ತುಗಳ ಆಧರಿತ ಬಯಲಾಟ, ದೊಡ್ಡಾಟ ಕಲೆ ನಮ್ಮ ಸಮಾಜಕ್ಕೆ ಮಾನವೀಯ ಮೌಲ್ಯಗಳನ್ನು ಕಲಿಸುತ್ತ ಬಂದಿವೆ. ಆಧುನಿಕ ಜನಾಂಗ ಪಾಶ್ಚಾತ್ಯ ಸಂಸ್ಕೃತಿಯತ್ತ ಆಕರ್ಷಿತರಾಗಿ ಇಂತಹ ಅಮೂಲ್ಯ ಕಲೆಗಳು ಕ್ಷೀಣಿಸುತ್ತಿವೆ. ಇಂತಹ ಕಲೆಗಳಿಗೆ ಲಿಂಗೈಕ್ಯ ಡಾ. ಸಿದ್ಧಲಿಂಗ ಮಹಾಸ್ವಾಮಿಗಳವರು ಸದಾ ಪ್ರೋತ್ಸಾಹ ನೀಡುತ್ತಿದ್ದರು. ಅವರ ಆಶೀರ್ವಾದ ಫಲವಾಗಿ ಸುತಾರ ಸಾಂಸ್ಕೃತಿಕ ಸಂಘ ಇಂದು ದಶಮಾನೋತ್ಸವ ಆಚರಿಸಿಕೊಳ್ಳುತ್ತ, ಉತ್ತರ ಕರ್ನಾಟಕದ ಗಂಡು ಕಲೆಯಾದ ಬಯಲಾಟ ದೊಡ್ಡಾಟ ಕಲೆಯನ್ನು ಉಳಿಸಿ ಬೆಳೆಸುವ ಕೆಲಸ ಮಾಡುತ್ತಿದೆ, ಸಂಘ ಕ್ರಿಯಾಶೀಲವಾಗಿ ಬೆಳೆಯಲಿ ಎಂದರು.
ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಗದುಗಿನ ಜ.ತೋಂಟದಾರ್ಯ ಮಠ ಕಲೆ, ಸಾಹಿತ್ಯ, ಸಂಗೀತ, ನಾಟಕ, ಸಂಸ್ಕೃತಿ ಪೋಷಿಸಿಕೊಂಡು ಬಂದಿದೆ. ಬಯಲಾಟ, ದೊಡ್ಡಾಟ ಕಲೆಗಳು ಇಂದು ಅಳುವಿನ ಅಂಚಿನಲ್ಲಿವೆ ಸಂಘ, ಸಂಸ್ಥೆಗಳು, ಸಮಾಜ, ಸರ್ಕಾರ ಈ ನಮ್ಮ ಮೂಲ ಕಲೆಗಳ ಉಳುವಿಗೆ ಮುಂದಾಗಬೇಕು . ಕಲಾವಿದರೂ ಕೂಡಾ ಜನರ ಅಭಿವೃಚಿಗಿ ತಕ್ಕಂತೆ ಸಮೀಕರಣಗೊಂಡು ಕಲೆ ಪ್ರದರ್ಶನ ನೀಡಬೇಕು ಎಂದು ಕರೆ ನೀಡಿದರು.
ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷರಾದ ಶರಣಬಸಪ್ಪ ಗುಡಿಮನಿ,
ಉಸಿರು ಫೌಂಡೇಶನ್ನಿನ ಅಧ್ಯಕ್ಷರಾದ ಶರಣು ಪಾಟೀಲ ಮದ್ದಲಿ ಬಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಗರ ಸಭೆಯ ಮಾಜಿ ಸದಸ್ಯ ಮಂಜುನಾಥ ಹೇ. ಮುಳಗುಂದ ಮಾತನಾಡಿದರು. ಸ.ಪ್ರ.ದ.ಮ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಸಿದ್ಧಲಿಂಗೇಶ್ವರ ಸಜ್ಜನಶಟ್ಟರ ಬಯಲಾಟ ಕಲೆಯ ಕುರಿತ ಉಪನ್ಯಾಸ ನೀಡಿದರು.
ಅತಿಥಿಗಳಾಗಿ ಗದಗ ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ರಾಜಗೋಪಾಲ ಕಡ್ಲಿಕೊಪ್ಪ , ಬೆಟಗೇರಿಯ ಶ್ರೀಕಾಳಿಕಾ ದೇವಸ್ಥಾನ ಟ್ರಸ್ಟಿನ ಅಧ್ಯಕ್ಷರಾದ ಶ್ರೀಧರ ಕೊಣ್ಣೂರ, ಗೌರಿ ಗಣೇಶ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಬಸವರಾಜ ಕುಂದಗೋಳ ಉಪಸ್ಥಿತರಿದ್ದರು.
ಸುತಾರ ಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ಅಶೋಕ ಸುತಾರ ಅಧ್ಯಕ್ಷತೆ ವಹಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಆರಂಭದಲ್ಲಿ ಸುತಾರ ಸಾಂಸ್ಕೃತಿಕ ಕಲಾ ಸಂಘದ ಕಲಾವಿದರು ಪ್ರಾರ್ಥಿಸಿದರು. ಅಶೋಕ ಸುತಾರ ಸ್ವಾಗತಿಸಿ ಪ್ರಾಸ್ಥಾವಿಕವಾಗಿ ಮಾತನಾಡಿದರು. ಸುಭಾಷ ಮಳಗಿ ವಂದಿಸಿದರು.
ಬಾಕ್ಸ್…….
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಡಿಯಲ್ಲಿ ನಾಡಿನ ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸುವ ಉದ್ದೇಶದಿಂದ ಸ್ಥಾಪಿತವಾದ ಅಕಾಡೆಮಿಗಳು ಆರ್ಥಿಕ ಸಂಕಷ್ಟದಿಂದ ನರಳುತ್ತಿವೆ. ಸಾಮರಸ್ಯ, ಸಂಸ್ಕಾರ, ಶಾಂತಿ, ನೆಮ್ಮದಿಯ ಸಮಾಜಕ್ಕಾಗಿ ಸಾಂಸ್ಕೃತಿಕ ವಾತಾವರಣ ನಿರ್ಮಾಣ ಸರ್ಕಾರದ ಜವಾಬ್ದಾರಿ. ಹೀಗಾಗಿ ಅಕಾಡೆಮಿಗಳಗೆ ಸರ್ಕಾರ ಹೆಚ್ಚು ಪ್ರೋತ್ಸಾಹ ನೀಡಬೇಕು.
ಡಾ. ಸಿದ್ದರಾಮ ಮಹಾಸ್ವಾಮೀಜಿ, ಗದಗ


