ದೆಹಲಿ, ನವೆಂಬರ್ 11: ಕೆಂಪುಕೋಟೆ ಸಮೀಪದಲ್ಲಿ ಸಂಭವಿಸಿದ ಭೀಕರ ಕಾರು ಸ್ಫೋಟದಿಂದ ಜನ ಬೆಚ್ಚಿಬಿದ್ದಿದ್ದಾರೆ. ಮೆಟ್ರೋ ನಿಲ್ದಾಣದ ಗೇಟ್ ಸಂಖ್ಯೆ ಒಂದರ ಬಳಿ ಈ ಘಟನೆ ನಡೆದಿದ್ದು, ಸ್ಥಳದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಈ ಘಟನೆಯು ಭಯೋತ್ಪಾದಕ ಕೃತ್ಯವಾಗಿರುವ ಬಗ್ಗೆ ತನಿಖಾ ಸಂಸ್ಥೆಗಳು ಶಂಕೆ ವ್ಯಕ್ತಪಡಿಸಿವೆ. ಕಾರಿನಲ್ಲಿ ಸ್ಫೋಟಕಗಳನ್ನು ಇರಿಸಿ ಸ್ಫೋಟಿಸಿರಬಹುದು ಅಥವಾ ಇದು ಆತ್ಮಾಹುತಿ ದಾಳಿಯಾಗಿರಬಹುದು ಎಂದು ಪ್ರಾಥಮಿಕವಾಗಿ ಅನುಮಾನಿಸಲಾಗಿದೆ. ಸ್ಫೋಟಗೊಂಡ ಐ20 ಕಾರಿನೊಳಗೆ ಒಬ್ಬ ವ್ಯಕ್ತಿ ಇದ್ದ ಎನ್ನಲಾಗಿದ್ದು, ಆತನ ಗುರುತು ಇನ್ನೂ ಪತ್ತೆಯಾಗಿಲ್ಲ. ಮೃತದೇಹದ ಡಿಎನ್‌ಎ ಪರೀಕ್ಷೆ ನಡೆಸಲಾಗುತ್ತಿದೆ. ಪುಲ್ವಾಮಾದ ತಾರೀಖ್ ಎಂಬಾತ ಈ ಕಾರಿನ ಮಾಲೀಕ ಎಂದು ತಿಳಿದುಬಂದಿದ್ದು, ಆತನನ್ನು ವಶಕ್ಕೆ ಪಡೆಯಲಾಗಿದೆ.


