ಕಾಂಗ್ರೆಸ್ ಸರ್ಕಾರ ಸಚಿವ ಸಂಪುಟಕ್ಕೆ ಸರ್ಜರಿ? ಮಂಗಳವಾರ ಹೈಕಮಾಂಡ್ ಜತೆ ಸಿಎಂ ಡಿಸಿಎಂ ಚರ್ಚೆ

Ravi Talawar
ಕಾಂಗ್ರೆಸ್ ಸರ್ಕಾರ ಸಚಿವ ಸಂಪುಟಕ್ಕೆ ಸರ್ಜರಿ? ಮಂಗಳವಾರ ಹೈಕಮಾಂಡ್ ಜತೆ ಸಿಎಂ  ಡಿಸಿಎಂ ಚರ್ಚೆ
WhatsApp Group Join Now
Telegram Group Join Now

ಬೆಂಗಳೂರು, ಜುಲೈ 29: ಲೋಕಸಭೆ ಚುನಾವಣೆ ಫಲಿತಾಂಶ, ಹಗರಣಗಳ ಆರೋಪದ ನಂತರ ಇದೀಗ ಕರ್ನಾಟಕ ಕಾಂಗ್ರೆಸ್ ಸರ್ಕಾರ ಸಚಿವ ಸಂಪುಟಕ್ಕೆ ಸರ್ಜರಿ ಆಗುವ ಸುಳಿವು ದೊರೆತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಮಂಗಳವಾರ ದೆಹಲಿಗೆ ತೆರಳಲಿದ್ದು, ಹೈಕಮಾಂಡ್ ಜತೆ ಚರ್ಚೆ ನಡೆಸಲಿದ್ದಾರೆ. ನಂತರ ಸಂಪುಟ ಬದಲಾವಣೆ ಅಥವಾ ಕೆಲವು ಸಚಿವರ ಖಾತೆ ಅದಲು ಬದಲು ಮಾಡುವ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯಲಿದೆ ಎನ್ನಲಾಗಿದೆ.

ಸಚಿವರ ಖಾತೆ ಅದಲು ಬದಲು ಮಾಡುವ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಚಿಂತನೆ ನಡೆದಿದೆ. ಕೆಲವು ಹಿರಿಯ ಸಚಿವರಿಂದಲೂ ಖಾತೆ ಬದಲಾವಣೆಗೆ ಸಲಹೆ ಬಂದಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ ಬಿ. ನಾಗೇಂದ್ರ ರಾಜೀನಾಮೆಯಿಂದ ತೆರವಾಗಿರುವ ಖಾತೆ ಕೂಡ ಸದ್ಯ ಸಿಎಂ ಬಳಿಯೇ ಇದೆ. ಇದಲ್ಲದೆ, ಪರಿಶಿಷ್ಟ ಪಂಗಡಗಳ ಕಲ್ಯಾಣ ಖಾತೆಯನ್ನು ಬೇರೊಬ್ಬ ಸಚಿವರಿಗೆ ಹಂಚಿಕೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಲೋಕಸಭೆ ಚುನಾವಣೆ ಫಲಿತಾಂಶವನ್ನೂ ಗಮನದಲ್ಲಿ ಇಟ್ಟುಕೊಂಡು ಖಾತೆ ಬದಲಾವಣೆಗೆ ಕಾಂಗ್ರೆಸ್ ಚಿಂತನೆ ನಡೆಸಿದೆ. ಕಳೆದೊಂದು ವರ್ಷಗಳಿಂದ ಪರಿಣಾಮಕಾರಿಯಾಗಿ ಖಾತೆ ನಿಭಾಯಿಸದವರಿಗೆ ಬದಲಾವಣೆ ಮೂಲಕ ಚುರುಕು ಮುಟ್ಟಿಸಲು ಪಕ್ಷ ತೀರ್ಮಾನಿಸಿದೆ. ಸುಮಾರು ಆರೇಳು ಮಂದಿ ಸಚಿವರ ಖಾತೆಗಳ ಅದಲು ಬದಲು ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಚಿಂತನೆ ನಡೆದಿದೆ. ಜತೆಗೆ, ಕೆಪಿಸಿಸಿ ಪುನರ್​​ರಚನೆ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದೆ.

ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಗಮನದಲ್ಲಿಟ್ಟುಕೊಂಡು ಕೆಪಿಸಿಸಿ ಸಾರಥ್ಯ ಬದಲಾವಣೆ ಬಗ್ಗೆ ಕಾಂಗ್ರೆಸ್ ಚಿಂತನೆ ನಡೆಸಿದೆ. ಈ ಮಧ್ಯೆ, ಕೆಪಿಸಿಸಿ ನೂತನ ಅಧ್ಯಕ್ಷರಾಗಲು ಹಲವರು ಪ್ರಭಾವ ಬಳಸುತ್ತಿದ್ದಾರೆ. ಏನೇ ಇದ್ದರೂ ಹೈಕಮಾಂಡ್ ಭೇಟಿಯ ಬಳಿಕವೇ ಸ್ಪಷ್ಟ ಚಿತ್ರಣ ಸಿಗಲಿದೆ. ಆಡಳಿತವನ್ನು ಕಪ್ಪು ಚುಕ್ಕೆ ಇಲ್ಲದಂತೆ ಇನ್ನಷ್ಟು ಚೆನ್ನಾಗಿ ನಡೆಸಿಕೊಂಡು ಹೋಗುವಂತೆ ಹೈಕಮಾಂಡ್ ಸಲಹೆ ನೀಡುವ ಸಾಧ್ಯತೆ ಇದೆ.

WhatsApp Group Join Now
Telegram Group Join Now
Share This Article