ನವದೆಹಲಿ: ಕೆಲವು ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಬೇಕಿರುವುದರಿಂದ ಮಧ್ಯಂತರ ಜಾಮೀನು ಅವಧಿಯನ್ನು ವಿಸ್ತರಿಸುವಂತೆ ಕೋರಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಲ್ಲಿಸಿರುವ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಅವರು ಈ ವಿಚಾರದಲ್ಲಿ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಎಂದು ಪೀಠ ಹೇಳಿದೆ.
ನ್ಯಾಯಮೂರ್ತಿಗಳಾದ ಜೆಕೆ ಮಹೇಶ್ವರಿ ಮತ್ತು ಕೆವಿ ವಿಶ್ವನಾಥನ್ ಅವರನ್ನೊಳಗೊಂಡ ರಜಾಕಾಲದ ಪೀಠ, ಶುಕ್ರವಾರದವರೆಗೆ ದೆಹಲಿ ಸಿಎಂ ಅರ್ಜಿಯನ್ನು ನ್ಯಾಯಮೂರ್ತಿ ದೀಪಂಕರ್ ದತ್ತಾ ನೇತೃತ್ವದ ರಜಾಕಾಲದ ಪೀಠದ ಮುಂದೆ ಏಕೆ ಸಲ್ಲಿಸಲಿಲ್ಲ ಕೇಜ್ರಿವಾಲ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರನ್ನು ಪ್ರಶ್ನಿಸಿತು.
ಕಳೆದ ತಿಂಗಳು ಎಎಪಿ ನಾಯಕನಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಮುಖ್ಯ ಪೀಠದಲ್ಲಿ ನ್ಯಾಯಮೂರ್ತಿ ದತ್ತಾ ಅವರು ಪ್ರಮುಖರು. ಮೇ 17 ರಂದು ಕೇಜ್ರಿವಾಲ್ ಅವರ ಮುಖ್ಯ ಅರ್ಜಿಯ ತೀರ್ಪನ್ನು ಅದು ಕಾಯ್ದಿರಿಸಿತ್ತು.