ದೆಹಲಿ ಆಗಸ್ಟ್ 20: ವೈದ್ಯೆಯ ಮೇಲೆ ಅತ್ಯಾಚಾರ, ಕೊಲೆ ಪ್ರಕರಣ ಖಂಡಿಸಿ ವೈದ್ಯರು ಪ್ರತಿಭಟನೆ ನಡೆಸುತ್ತಿರುವಾಗಲೇ ಗುಂಪು ದಾಳಿ ನಡೆದ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF ) ನಿಯೋಜಿಸುವಂತೆ ಸುಪ್ರೀಂಕೋರ್ಟ್ ಮಂಗಳವಾರ ಕೇಂದ್ರಕ್ಕೆ ನಿರ್ದೇಶನ ನೀಡಿದೆ. ಪಶ್ಚಿಮ ಬಂಗಾಳದ ವೈದ್ಯರ ಸಂಘಟನೆಯ ಪರವಾಗಿ ಹಾಜರಾದ ವಕೀಲರು ಘಟನೆಗಳ ವಿವರಗಳನ್ನು ನ್ಯಾಯಾಲಯಕ್ಕೆ ನೀಡಿದ್ದಾರೆ. ಆಗಸ್ಟ್ 14ರಂದು ” Reclaiming the night ” ಪ್ರತಿಭಟನೆಯಲ್ಲಿ ವೈದ್ಯರು ಭಾಗವಹಿಸುತ್ತಿದ್ದಾಗ, ಆರ್‌ಜಿ ಕರ್ ಆಸ್ಪತ್ರೆಯ ಮಹಿಳಾ ವೈದ್ಯರಿಗೆ ಪ್ರತಿಭಟನೆಯನ್ನು ಮುಂದುವರೆಸಿದರೆ ಅತ್ಯಾಚಾರ ಸಂತ್ರಸ್ತರಿಗೆ ಆದ ಅದೇ ಗತಿ ಬರಲಿದೆ ಎಂದು ಬೆದರಿಕೆ ಹಾಕಲಾಗಿತ್ತು ಎಂದು ವಕೀಲರು ತಿಳಿಸಿದ್ದಾರೆ.
“ಈ ಪೊಲೀಸರು ವೈದ್ಯರಿಗೆ ರಕ್ಷಣೆ ನೀಡುತ್ತಾರೆಯೇ?” ಎಂದು ನ್ಯಾಯಮೂರ್ತಿ ಪರ್ದಿವಾಲಾ ಪಶ್ಚಿಮ ಬಂಗಾಳ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಆರ್‌ಜಿ ಕರ್ ಆಸ್ಪತ್ರೆಯಲ್ಲಿ ಒಟ್ಟು 700 ಸಿಬ್ಬಂದಿ ಇದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು. ಆದಾಗ್ಯೂ, ದಾಳಿ ನಂತರ, ಹೆಚ್ಚಿನ ವೈದ್ಯರು ಆಸ್ಪತ್ರೆ ತೊರೆದಿದ್ದು ಸುಮಾರು 100 ಮಂದಿ ಮಾತ್ರ ಉಳಿದಿದ್ದಾರೆ. 700 ಸಿಬ್ಬಂದಿಗಳು ಮತ್ತು 250 ಮಹಿಳೆಯರು ಇದ್ದಾರೆ. 30 ರಿಂದ 40 ಮಹಿಳಾ ಸಿಬ್ಬಂದಿ ಮತ್ತು 60-70 ಪುರುಷ ನಿವಾಸಿಗಳು ಉಳಿದಿದ್ದಾರೆ. ಉಳಿದವರು ಆಸ್ಪತ್ರೆ ತೊರೆದಿದ್ದಾರೆ ಎಂದು ಹೇಳಲಾಗಿದೆ.