ನವದೆಹಲಿ,ಏಪ್ರಿಲ್ 02: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಎಎಪಿ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್‌ಗೆ ಸುಪ್ರೀಂ ಕೋರ್ಟ್ ಮಂಗಳವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದು, ಈ ತೀರ್ಪನ್ನು ಆಮ್ ಆದ್ಮಿ ಪಕ್ಷ (ಎಎಪಿ) ಸ್ವಾಗತಿಸಿದೆ.
ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಎಎಪಿ ನಾಯಕರು, ಇಡೀ ಅಬಕಾರಿ ನೀತಿ ಹಗರಣ ಪ್ರಕರಣವು ಸಾಕ್ಷಿಗಳಿಂದ ಬಲವಂತದ ಮೂಲಕ ಪಡೆದ ಹೇಳಿಕೆಗಳ ಮೇಲೆ ಅವಲಂಬಿತವಾಗಿದೆ ಎಂಬುದನ್ನು ನ್ಯಾಯಾಲಯದ ಆದೇಶವು ಬಹಿರಂಗಪಡಿಸಿದೆ ಎಂದು ಪ್ರತಿಪಾದಿಸಿದ್ದಾರೆ.
ಸಂಜಯ್ ಸಿಂಗ್ ಅವರನ್ನು ಮಂಗಳವಾರ ಬೆಳಗ್ಗೆ ಆಸ್ಪತ್ರೆಗೆ ಕರೆತರಲಾಗಿದ್ದು, ಬುಧವಾರ ಅವರನ್ನು ಡಿಸ್ಚಾರ್ಜ್ ಮಾಡುವ ಸಾಧ್ಯತೆ ಇದೆ ಎಂದು ಅಧಿಕೃತ ಮೂಲಗಳು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿವೆ.
ಅಕ್ಟೋಬರ್ 4 ರಂದು ಈಗ ರದ್ದಾಗಿರುವ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಸಂಜಯ್ ಸಿಂಗ್ ಅವರನ್ನು ಬಂಧಿಸಿತ್ತು.
‘ದೇಶದಲ್ಲಿ ಪ್ರಜಾಪ್ರಭುತ್ವಕ್ಕೆ ಇದು ಒಂದು ದೊಡ್ಡ ದಿನ ಮತ್ತು ಸಂತೋಷ ಮತ್ತು ಭರವಸೆಯ ಕ್ಷಣವಾಗಿದೆ’ ಎಂದು ದೆಹಲಿ ಸಚಿವ ಸೌರಭ್ ಭಾರದ್ವಾಜ್ ಹೇಳಿದರು.
ಎರಡು ವರ್ಷಗಳಿಂದ ಎಎಪಿ ನಾಯಕರನ್ನು ಸುಳ್ಳು ಪ್ರಕರಣಗಳಲ್ಲಿ ಗುರಿಯಾಗಿಸಿ ಬಂಧಿಸಲಾಗಿದೆ ಎಂದು ದೆಹಲಿ ಸರ್ಕಾರದ ಕ್ಯಾಬಿನೆಟ್ ಸಚಿವೆ ಅತಿಶಿ ಹೇಳಿದ್ದಾರೆ.
‘ನ್ಯಾಯಾಲಯದ ವಿಚಾರಣೆಯಲ್ಲಿ ಎರಡು ಮಹತ್ವದ ವಿಚಾರಗಳು ಬಹಿರಂಗಗೊಂಡಿವೆ. ಮೊದಲನೆಯದಾಗಿ, ಹಣದ ಜಾಡಿನ ಬಗ್ಗೆ ಸುಪ್ರೀಂ ಕೋರ್ಟ್ ಪ್ರಶ್ನಿಸಿದಾಗ ಜಾರಿ ನಿರ್ದೇಶನಾಲಯ (ಇಡಿ) ಪ್ರತಿಕ್ರಿಯೆ ನೀಡಲು ವಿಫಲವಾಗಿದೆ; ಎರಡನೆಯದಾಗಿ, ಇ.ಡಿ ರೂಪಿಸಿರುವ ಈ ಪ್ರಕರಣವು ಅರವಿಂದ್ ಕೇಜ್ರಿವಾಲ್ ಅವರನ್ನು ದೋಷಾರೋಪಣೆ ಮಾಡಲು ಬಲವಂತಪಡಿಸಿದ ಸಾಕ್ಷಿಗಳ ಹೇಳಿಕೆಗಳ ಮೇಲೆ ನಿಂತಿದೆ’ ಎಂದು ಅವರು ಹೇಳಿದರು.
ಅಬಕಾರಿ ನೀತಿ ಪ್ರಕರಣದಲ್ಲಿ ಇ.ಡಿಯಿಂದ ಬಂಧನಕ್ಕೊಳಗಾಗಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಮವಾರ ಏಪ್ರಿಲ್ 15 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಅತಿಶಿ ಈ ಹಿಂದೆ X ನಲ್ಲಿನ ಪೋಸ್ಟ್‌ನಲ್ಲಿ, ಸಂಜಯ್ ಸಿಂಗ್ ಅವರ ಜಾಮೀನಿನ ಸುದ್ದಿಯನ್ನು ಹಂಚಿಕೊಂಡರು ಮತ್ತು ಹಿಂದಿಯಲ್ಲಿ, ಸತ್ಯಮೇವ ಜಯತೆ ಎಂದು ಬರೆದಿದ್ದರು.