ಪಾಟ್ನಾ (ಬಿಹಾರ): ಪಬ್‌ಜಿ ಗೇಮ್ನ ವ್ಯಸನ ಬಿಹಾರದಲ್ಲಿ ಮತ್ತೊಂದು ಜೀವವನ್ನು ಬಲಿಪಡೆದಿದೆ. PUBG ಆಟವಾಡುವುದನ್ನು ನಿಲ್ಲಿಸಿದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಪಾಟ್ನಾದ ಅಗಮ್ಕುವಾನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 25 ವರ್ಷದ ವಿಕಾಶ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡ ಯುವಕ. ಪತ್ನಿ ಮನಿತಾ ಕುಮಾರಿ PUBG ಆಟ ಆಡದಂತೆ ತಿಳಿ ಹೇಳಿದ ಬಳಿಕ ಪತಿ ವಿಕಾಶ್ ಯಾವಾಗಲೂ ಮೊಬೈಲ್ನಲ್ಲೇ ಮುಳುಗಿರುತ್ತಿದ್ದನೆಂದು ಸ್ಥಳೀಯರು ಮಾಹಿತಿ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ವಿಕಾಶ್ ಮತ್ತು ಅವರ ಮನಿತಾ ಕಳೆದ ಒಂದು ವರ್ಷದ ಹಿಂದೆಯಷ್ಟೇ ವಿವಾಹವಾಗಿದ್ದರು. ಇಬ್ಬರೂ ಪಾಟ್ನಾ ನಗರದ ಗುಡ್ಡಗಾಡು ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಪಬ್‌ಜಿ ಗೇಮ್ನ ವ್ಯಸನಿಯಾಗಿದ್ದ ವಿಕಾಶ್, ಕಳೆದ ಕೆಲವು ತಿಂಗಳುಗಳಿಂದ ಆನ್‌ಲೈನ್ ಗೇಮಿಂಗ್ ಅಪ್ಲಿಕೇಶನ್ PUBG ನಲ್ಲಿ ಹೆಚ್ಚು ಕಾಲ ಕಳೆಯಲು ಶುರು ಮಾಡಿದ್ದ. ಈ ಆಟದ ಮೂಲಕ ಹಣ ಗಳಿಸಲು ಯತ್ನಿಸುತ್ತಿದ್ದದ್ದು ನಮ್ಮ ಗಮನಕ್ಕೂ ಬಂದಿತ್ತು. ಪಬ್‌ಜಿ ಆಟ ಆಡುವುದನ್ನು ಬಿಟ್ಟು ಕೆಲಸ ಹುಡುಕುವಂತೆ ಪತ್ನಿ ಮನಿತಾ ಪದೇ ಪದೆ ಸಲಹೆ ನೀಡಿದ ಹೊರತಾಗಿಯೂ ಅದರಿಂದ ಹೊರ ಬಂದಿರಲಿಲ್ಲ. ಬುಧವಾರ ರಾತ್ರಿ ಈ ವಿಚಾರವಾಗಿ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಸಿಟ್ಟಿನಲ್ಲಿ ಮನಿತಾ ಚಿಕ್ಕಪ್ಪನ ಮನೆಗೆ ಹೋಗಿದ್ದಳು. ಮನೆಯಲ್ಲಿ ವಿಕಾಶ್ ಒಬ್ಬನೇ ಇದ್ದ. ಈ ವೇಳೆ ಆತ್ಮಹತ್ಯೆಯ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಅಕ್ಕ-ಪಕ್ಕದ ಜನ ಮಾತನಾಡಿಕೊಳ್ಳುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ವಿಕಾಶ್ ಕುಟುಂಬ ದೆಹಲಿಯಲ್ಲಿ ವಾಸಿಸುತ್ತಿದ್ದು, ಈ ಬಗ್ಗೆ ಅವರಿಗೆ ಮಾಹಿತಿ ನೀಡಲಾಗಿದೆ. ಮನಿತಾಳ ಕುಟುಂಬಸ್ಥರು ಕೂಡ ಸ್ಥಳಕ್ಕೆ ಆಗಮಿಸಿದ್ದಾರೆ. ಮೃತದೇಹದ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ. ಯಾವುದೇ ಟಿಪ್ಪಣಿ ಪತ್ರ ಕೂಡ ಕಂಡುಬಂದಿಲ್ಲ. ಮೃತನ ಪತ್ನಿ ಮತ್ತು ನೆರೆಹೊರೆಯವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಪ್ರಾಥಮಿಕ ತನಿಖೆಯ ಆಧಾರದ ಮೇಲೆ, ಇದು ಗೇಮಿಂಗ್ ಚಟ ಮತ್ತು ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದ ಪ್ರಕರಣವೆಂದು ಪರಿಗಣಿಸಲಾಗಿದೆ. ದೂರು ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.