ಬಳ್ಳಾರಿ,ಜ.14.: ತೀವ್ರ ಆರ್ಥಿಕ ಶೋಷಣೆ ಮತ್ತು ರಾಜಕೀಯ ದಮನದ ವಿರುದ್ಧ ಧೈರ್ಯದಿಂದ ಹೋರಾಡುತ್ತಿರುವ ಇರಾನ್‌ನ ಧೀರ ಜನರ ಮೇಲೆ ಅಲ್ಲಿನ ಸರ್ವಾಧಿಕಾರಿ ಆಡಳಿತಗಾರರು ಎಸಗುತ್ತಿರುವ ಕ್ರೂರ ದೌರ್ಜನ್ಯಗಳನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಎಸ್‌ಯುಸಿಐ(ಕಮ್ಯುನಿಸ್ಟ್) ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರವಾಶ್ ಘೋಷ್ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ ಎಂದು ಜಿಲ್ಲಾ ಕಾರ್ಯದರ್ಶಿ ರಾಧಕೃಷ್ಣ ಉಪಾಧ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಬ್ಬಾಳಿಕೆಯ ಇಸ್ಲಾಮಿಕ್ ಸರ್ವಾಧಿಕಾರಿ ಆಡಳಿತದ ವಿರುದ್ಧ ವೀರಾವೇಶದ ಚಳವಳಿಯನ್ನು ನಡೆಸುತ್ತಿರುವ ಇರಾನ್‌ನ ಧೀಮಂತ ಜನತೆಗೆ ನಾವು ನಮ್ಮ ಸಂಪೂರ್ಣ ಬೆಂಬಲ ಮತ್ತು ಸಹಮತವನ್ನು ವ್ಯಕ್ತಪಡಿಸುತ್ತೇವೆ. ಅದೇ ಸಮಯದಲ್ಲಿ, ಯಾವುದೇ ನೆಪದಲ್ಲಿ ಇರಾನ್‌ನ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಬಾರದು ಮತ್ತು ಇರಾನ್‌ನ ಭವಿಷ್ಯವನ್ನು ನಿರ್ಧರಿಸಲು ಅಲ್ಲಿನ ಹೋರಾಟಗಾರರಿಗೇ ಬಿಡಬೇಕು ಎಂದು ನಾವು ಅಮೆರಿಕನ್ ಸಾಮ್ರಾಜ್ಯಶಾಹಿಗಳಿಗೆ ಎಚ್ಚರಿಕೆ ನೀಡುತ್ತೇವೆ ಎಂದಿದ್ದಾರೆ.
ಹೋರಾಟನಿರತ ಇರಾನ್ ಜನರ ಪರವಾಗಿ ನಿಲ್ಲಬೇಕೆಂದು ಮತ್ತು ಅಮೆರಿಕನ್ ಸಾಮ್ರಾಜ್ಯಶಾಹಿಗಳು ಇರಾನ್‌ನ ಆಂತರಿಕ ವ್ಯವಹಾರಗಳಲ್ಲಿ ಯಾವುದೇ ರೀತಿಯಲ್ಲಿ ಹಸ್ತಕ್ಷೇಪ ಮಾಡದಂತೆ ತಡೆಯಬೇಕೆಂದು ನಾವು ವಿಶ್ವದ ಜನತೆಗೆ ಮನವಿ ಮಾಡಿದೆ.
ಈ ಮಹಾನ್ ಐತಿಹಾಸಿಕ ಚಳವಳಿಯ ಸಂದರ್ಭದಲ್ಲಿ ಹುತಾತ್ಮರಾದವರ ಕುಟುಂಬಗಳಿಗೆ ನಾವು ನಮ್ಮ ಸಂತಾಪವನ್ನು ವ್ಯಕ್ತಪಡಿಸುತ್ತೇವೆ. ಪ್ರಜಾತಾಂತ್ರಿಕ ಹಕ್ಕುಗಳ ಮರುಸ್ಥಾಪನೆ ಮತ್ತು ಕಡುಬಡತನದ ಆರ್ಥಿಕ ಶೋಷಣೆಯನ್ನು ಕೊನೆಗಾಣಿಸುವ ಉದ್ದೇಶಕ್ಕಾಗಿ ಅವರು ತೋರಿದ ತ್ಯಾಗದ ಮನೋಭಾವಕ್ಕೆ ನಮ್ಮ ನಮನಗಳು. ಇರಾನ್‌ನ ಧೀರ ಜನತೆ ಚಿರಾಯುವಾಗಲಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


