ಬೆಳಗಾವಿ.ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರಮಾಪ್ತರು, ಅವರ ಸಂಪುಟದ ಹಿರಿಯ ಸಹೋದ್ಯೋಗಿ ಸಚಿವ ರಾಜಣ್ಣ ಅವರು ಸಂಪುಟದಿಂದ ವಜಾ ಮಾಡುವ ಯಾವ ಘೋರ ಅಪರಾಧ ಮಾಡಿದ್ದಾರೆ ಎಂದು ರಾಜ್ಯದ ಜನತೆ ಕೇಳುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ ಅವರು ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು, ರಾಜಣ್ಣ ಅವರ ಮಹಾ ತಪ್ಪಾದರೂ ಏನು ಎಂದು ಪ್ರಶ್ನಿಸಿದರು. ರಾಜಣ್ಣ ಅವರ ವಜಾ ಮಾಡುವಿಕೆ ಕೇವಲ ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರವಲ್ಲ; ಯಾವ ಕಾರಣಕ್ಕಾಗಿ ಅವರನ್ನು ಸಂಪುಟದಿಂದ ಕಿತ್ತು ಬಿಸಾಕಿದ್ದಾರೆ? ರಾಹುಲ್ ಗಾಂಧಿ, ಕಾಂಗ್ರೆಸ್ ಪಕ್ಷಕ್ಕೆ ಪರಿಶಿಷ್ಟ ಪಂಗಡದವರ ಬಗ್ಗೆ ಇಷ್ಟೇನಾ ಪ್ರೀತಿ- ವಿಶ್ವಾಸ ಇರುವುದು?
ರಾಹುಲ್ ಗಾಂಧಿಯವರು ಕಳೆದ ವಾರ ಬೆಂಗಳೂರಿಗೆ ಬಂದು ಚುನಾವಣಾ ಆಯೋಗದ ಮೇಲೆ ಆರೋಪದ ಮೇಲೆ ಆರೋಪ ಮಾಡಿದ್ದರು. ಬಿಜೆಪಿ ಕೇಂದ್ರದಲ್ಲಿ ಅಕ್ರಮವಾಗಿ ಅಧಿಕಾರಕ್ಕೆ ಬಂದಿದೆ ಎಂಬಂತೆ ದೇಶದ ಜನರ ಮುಂದೆ ಬಿಂಬಿಸಿದ್ದಾರೆ. ಚುನಾವಣಾ ಆಯೋಗಕ್ಕೆ ದೂರು ಕೊಡದೇ ಪಲಾಯನ ಮಾಡಿದ್ದಾರೆ. ಮತ್ತೊಂದು ಕಡೆ ರಾಜಣ್ಣನವರು ಸತ್ಯವನ್ನು ಬಹಿರಂಗ ಪಡಿಸಿದಾಗ ಅವರನ್ನು ಸಂಪುಟದಿಂದ ವಜಾ ಮಾಡಿದ್ದು ಖಂಡಿತ ಸರಿಯಲ್ಲ ಸಂವಿಧಾನದ ಪುಸ್ತಕ ಕೈಯಲ್ಲಿ ಹಿಡಿದು ದೇಶಾದ್ಯಂತ ತಿರುಗುವ ರಾಹುಲ್ ಗಾಂಧಿಯವರಿಗೆ ಸತ್ಯವನ್ನು ಅರಗಿಸಿಕೊಳ್ಳುವ, ಸತ್ಯವನ್ನು ಕೇಳಿಸಿಕೊಳ್ಳುವ ಧೈರ್ಯ ಇಲ್ಲವೇ ಎಂದು ಪ್ರಶ್ನಿಸಿದರು.
ಒಬ್ಬ ಪರಿಶಿಷ್ಟ ಪಂಗಡಕ್ಕೆ ಸೇರಿದ ಸಚಿವರನ್ನು ಕಾಂಗ್ರೆಸ್ ಪಕ್ಷ ನಡೆಸಿಕೊಳ್ಳುವ ರೀತಿ ಇದುವೇ? ಯಾವ ಬಾಬಾ ಸಾಹೇಬ ಅಂಬೇಡ್ಕರರ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವ ಕಾಂಗ್ರೆಸ್ ಪಕ್ಷದವರು, ರಾಜಣ್ಣನವರ ಬಗ್ಗೆ ನಡೆದುಕೊಂಡಿರುವುದು ಸರಿಯೇ ಎಂದು ರಾಜ್ಯಾದ್ಯಂತ ಜನರು ಪ್ರಶ್ನೆ ಮಾಡುತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ ತಿಳಿಸಿದ್ದಾರೆ