ಬೆಂಗಳೂರು: ಅಕ್ಟೋಬರ್ 21 ರಿಂದ ವಾರಾಂತ್ಯದ ದಿನಗಳಲ್ಲೂ ಉಪನೋಂದಣಿ ಕಚೇರಿ ಕಾರ್ಯನಿರ್ವಹಿಸಲಿವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಸೋಮವಾರ ಹೇಳಿದರು.
ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ದುಡಿಯುವ ಮಧ್ಯಮ ವರ್ಗದ ಜನ ವಾರದ ದಿನಗಳಲ್ಲಿ ತಮ್ಮ ಕೆಲಸಗಳನ್ನು ಬಿಟ್ಟು ನೋಂದಣಿ ಕಚೇರಿಗಳಿಗೆ ಆಗಮಿಸುವುದು ಕಷ್ಟ. ಅಲ್ಲದೆ, ನೋಂದಣಿಗಾಗಿ ಹೊರ ರಾಜ್ಯದಿಂದ ಆಗಮಿಸುವವರಿಗೂ ಅನಾನುಕೂಲ ಉಂಟಾಗುತ್ತಿದೆ. ಹೀಗಾಗಿ ದುಡಿಯುವ ವರ್ಗದ ಜನರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಎರಡನೇ-ನಾಲ್ಕನೇ ಶನಿವಾರ ಹಾಗೂ ಭಾನುವಾರಗಳಲ್ಲೂ ನೋಂದಣಿ ಕಚೇರಿಗಳನ್ನು ತೆರೆಯಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಅಕ್ಟೋಬರ್ 21ರ ನಂತರ ಪ್ರತಿ ನೋಂದಣಿ ಜಿಲ್ಲೆಗಳಲ್ಲಿ ಒಂದು ರಿಜಿಸ್ಟರ್ ಕಚೇರಿ ಶನಿವಾರ ಭಾನುವಾರ ರಜಾ ದಿನಗಳಲ್ಲೂ ಕಾರ್ಯನಿರ್ವಹಿಸಲಿವೆ. ರಜೆ ದಿನಗಳಲ್ಲಿ ಯಾವ ನೋಂದಣಿ ಕಚೇರಿ ಕಾರ್ಯನಿರ್ವಹಿಸಲಿವೆ ಎಂದು ಅವಧಿಗೆ ಮೊದಲೇ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ನೋಂದಣಿಗಾಗಿ ಸಾರ್ವಜನಿಕರು ಅರ್ಜಿ ಹಾಕಿದಾಗ ಯಾವ ಕಚೇರಿ ತೆರೆದಿರುತ್ತದೆ ಎಂಬ ಮಾಹಿತಿಯನ್ನು ಆನ್ಲೈನ್ ಮೂಲಕ ನೀಡಲಾಗುತ್ತದೆ ಎಂದು ತಿಳಿಸಿದರು.
ಶನಿವಾರ-ಭಾನುವಾರಗಳಲ್ಲೂ ನೋಂದಣಿ ಕಚೇರಿಗಳನ್ನು ತೆರೆಯಬೇಕು ಎಂಬ ಒತ್ತಾಯ ಈ ಹಿಂದಿನಿಂದಲೂ ಇತ್ತು. ಅಲ್ಲದೆ, ಬಜೆಟ್ ವೇಳೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಇಲಾಖೆಗೆ ಸೂಚನೆ ನೀಡಿದ್ದರು. ಹೀಗಾಗಿ ಇದಕ್ಕೆ ಬೇಕಾದಂತೆ ಕಾನೂನುಗಳನ್ನು ತಿದ್ದುಪಡಿ ಮಾಡಿ, ಈ ಬಗ್ಗೆ ಸಚಿವ ಸಂಪುಟದಿಂದಲೂ ಅನುಮೋದನೆ ಪಡೆಯಲಾಗಿದೆ ಎಂದರು.