ವಿಜಯಪುರ, ಏ.೧೦: ಮಾರ್ಚ್ ೨೦೨೬ರಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ವಿಶಿಷ್ಟ ಸಾಧನೆ ಮಾಡಿ ಜಿಲ್ಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ಅವರು ಸನ್ಮಾನಿಸಿ ಅಭಿನಂದಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ಕುಡಿಯುವ ನೀರಿನ ನಿರ್ವಹಣೆ ಕುರಿತ ನಡೆದ ಸಭೆಯ ನಂತರ ವಿಧ್ಯಾರ್ಥಿಗಳಿಗೆ ಅಭಿನಂದಿಸಿ ಮಾತನಾಡಿದರು, ವಿದ್ಯಾರ್ಥಿಗಳ ಪರಿಶ್ರಮ, ಶ್ರದ್ಧೆ ಮತ್ತು ನಿಷ್ಠೆಯೇ ಈ ಸಾಧನೆಗೆ ಮೂಲ ಕಾರಣವಾಗಿದ್ದು, ಶಿಕ್ಷಕರ ಮಾರ್ಗದರ್ಶನ ಹಾಗೂ ಪೋಷಕರ ಬೆಂಬಲವೂ ಅವರ ಯಶಸ್ಸಿಗೆ ಮಹತ್ವದ ಪಾತ್ರ ವಹಿಸಿದೆ ಎಂದು ಹೇಳಿದರು.
ಇಂತಹ ಸಾಧನೆಗಳು ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದು, ಜಿಲ್ಲೆಯ ಶೈಕ್ಷಣಿಕ ಮಟ್ಟವನ್ನು ಮತ್ತಷ್ಟು ಉನ್ನತಿಗಾಗಿ ಸಹಾಯಕವಾಗುತ್ತವೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣದತ್ತ ಗಮನ ಹರಿಸಿ, ತಮ್ಮ ಪ್ರತಿಭೆಯನ್ನು ದೇಶ ಸೇವೆಗೆ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದ ಸಚಿವರು, ಸರ್ಕಾರವು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಗತ್ಯವಾದ ಎಲ್ಲಾ ಸೌಲಭ್ಯಗಳು ಮತ್ತು ಪ್ರೋತ್ಸಾಹವನ್ನು ನೀಡಲು ಬದ್ಧವಾಗಿದೆ ಎಂದು ತಿಳಿಸಿದರು.
ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಸಾನಿಕ ಮಟಗಾರ, ಎಸ್.ಎಸ್.ಪದವಿ ಪೂರ್ವ ಕಾಲೇಜು ರಾಜ್ಯಕ್ಕೆ ದ್ವಿತೀಯ ಸ್ಥಾನ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ. ಅಕ್ಷತಾ ಚವ್ಹಾಣ, ಯಶಸ್ವಿ ಪದವಿ ಪೂರ್ವ ಕಾಲೇಜು ರಾಜ್ಯಕ್ಕೆ ತೃತೀಯ ಸ್ಥಾನ ಹಾಗೂ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದು ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಲಕ್ಷ್ಮಿ ನಂದೂರ, ಬರಡೋಲ ಸರ್ಕಾರಿ ಪದವಿ ಪೂರ್ವ ಕಾಲೇಜು ರಾಜ್ಯಕ್ಕೆ ತೃತೀಯ ಸ್ಥಾನ ಹಾಗೂ ಜಿಲ್ಲೆಗೆ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಯುವರಾಜ ಬಾಗಲಿ, ಎಸ್.ಎಸ್.ಪದವಿ ಪೂರ್ವ ಕಾಲೇಜು ರಾಜ್ಯಕ್ಕೆ ನಾಲ್ಕನೇ ಸ್ಥಾನ ಹಾಗೂ ಜಿಲ್ಲೆಗೆ ತೃತೀಯ ಸ್ಥಾನ ಪಡೆದು ಜಿಲ್ಲೆಯ ಹೆಮ್ಮೆ ಹೆಚ್ಚಿಸಿದ್ದಾರೆ.
ಸನ್ಮಾನ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಶಾಲು ಹೊದಿಸಿ, ಸ್ಮರಣಿಕೆ ಹಾಗೂ ಪುಷ್ಪಗುಚ್ಛ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳು ತಮ್ಮ ಯಶಸ್ಸಿಗೆ ಕಾರಣವಾದ ಪೋಷಕರು, ಶಿಕ್ಷಕರು ಹಾಗೂ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.
ನಮ್ಮ ಜಿಲ್ಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿರುವುದು ಜಿಲ್ಲೆಯ ಶೈಕ್ಷಣಿಕ ಪ್ರಗತಿಯನ್ನು ಪ್ರತಿಬಿಂಬಿಸುತ್ತದೆ. ಇದು ಜಿಲ್ಲೆಯ ಇತರ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾಗಿದ್ದು, ಭವಿಷ್ಯದಲ್ಲಿ ಇನ್ನಷ್ಟು ಉತ್ತಮ ಫಲಿತಾಂಶಗಳನ್ನು ನಿರೀಕ್ಷಿಸುವ ವಿಶ್ವಾಸವನ್ನು ಮೂಡಿಸಿದೆ ಎಂದು ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ವಿಠ್ಠಲ ಕಟಕದೊಂಡ, ರಾಜುಗೌಡ ಪಾಟೀಲ, ಅಶೋಕ ಮನಗೂಳಿ, ಜಿಲ್ಲಾಧಿಕಾರಿಗಳಾದ ಆಂನದ ಕೆ., ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಪಿಯು ಡಿಡಿ ಸಿ.ಕೆ ಹೊಸಮನಿ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು, ಕಾಲೇಜುಗಳ ಪ್ರಾಂಶುಪಾಲರು, ಶಿಕ್ಷಕರು, ಪೋಷಕರು ಉಪಸ್ಥಿತರಿದ್ದರು.


