ಪೆನುಗೊಂಡ (ಆಂಧ್ರ ಪ್ರದೇಶ): ಇಲ್ಲಿನ ಕಿಯಾ ಘಟಕದಲ್ಲಿ ಬರೋಬ್ಬರಿ 900 ಕಾರು ಇಂಜಿನ್ಗಳು ಕಳ್ಳತನವಾಗಿರುವ ಪ್ರಕರಣ ಬಯಲಾಗಿದೆ. ಶ್ರೀ ಸತ್ಯ ಸಾಯಿ ಜಿಲ್ಲೆಯ ಪೆನುಕೊಂಡದಲ್ಲಿರುವ ಕಿಯಾ ಘಟಕದಲ್ಲಿ ನಡೆದಿರುವ ಈ ಬೃಹತ್ ಕಳ್ಳತನ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಇದು ಗಂಭೀರ ಆತಂಕವನ್ನು ಸೃಷ್ಟಿಸಿದೆ.
ಆರಂಭದಲ್ಲಿ ಕಿಯಾ ಮಂಡಳಿ ಆತಂರಿಕವಾಗಿ ಈ ಕಳ್ಳತನ ಪ್ರಕರಣ ತನಿಖೆಗೆ ಮುಂದಾಯಿತು. ಆದರೆ, ಇದು ಬಗೆಹರಿಯದ ಹಿನ್ನೆಲೆ ಅವರು ಮಾರ್ಚ್ 19ರಂದು ಪೊಲೀಸರ ಮೊರೆ ಹೋಗಿದ್ದಾರೆ. ಆದರೆ, ಅಧಿಕೃತ ದೂರಿನ ಬಳಿಕವೇ ಈ ಪ್ರಕರಣ ಕುರಿತು ತನಿಖೆ ಕೈಗೆತ್ತಿಕೊಳ್ಳಲು ಸಾಧ್ಯ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ ಬೆನ್ನಲ್ಲೇ ಕಿಯಾ ಪ್ರತಿನಿಧಿಗಳು ಅಧಿಕೃತ ದೂರು ಸಲ್ಲಿಸಿದ್ದಾರೆ. ಇದೀಗ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ. ಇದಕ್ಕಾಗಿ ವಿಶೇಷ ತಂಡವನ್ನು ಜಿಲ್ಲಾಡಳಿತ ಪೊಲೀಸರು ರಚಿಸಿದ್ದು, ತನಿಖೆ ಸಾಗಿದೆ.
ವಿವಿಧ ಸ್ಥಳಗಳಿಂದ ಕಿಯಾದ ಬಿಡಿ ಭಾಗಗಳು ಬರುತ್ತವೆ. ಕಾರ್ ಇಂಜಿನ್ ತಮಿಳುನಾಡಿನಿಂದ ಬರುತ್ತದೆ ಎಂದು ಕಿಯಾ ಮೂಲಗಳು ತಿಳಿಸಿವೆ. ತಮಿಳುನಾಡಿನಿಂದ ಬರುವಾಗ ಕಾರಿನ ಇಂಜಿನ್ಗಳು ನಾಪತ್ತೆಯಾಗಿವೆಯಾ ಅಥವಾ ಪೆನುಕೊಂಡಾಗೆ ಬಂದ ಬಳಿಕ ಇವು ಕಣ್ಮರೆಯಾಗಿವೆಯಾ ಎಂಬ ಎರಡು ದಿಕ್ಕಿನಲ್ಲಿ ತನಿಖೆ ಸಾಗಿದೆ. ಈ ತನಿಖೆ ಹೆಚ್ಚು ಸಂಕೀರ್ಣತೆಯಿಂದ ಕೂಡಿದ್ದು, ಶೀಘ್ರದಲ್ಲಿ ಈ ಕುರಿತು ಪೊಲೀಸರು ಮಾಧ್ಯಮಗೋಷ್ಟಿ ನಡೆಸಿ ವಿವರ ನೀಡುವ ಸಾಧ್ಯತೆ ಇದೆ. ಸದ್ಯ ಕಿಯಾ ಘಟಕದಲ್ಲಿ ನಡೆದಿರುವ ಇಷ್ಟು ದೊಡ್ಡ ಮಟ್ಟದ ಕಳ್ಳತನ ಪ್ರಕರಣ ಸಾಕಷ್ಟು ಅನುಮಾನ ಮತ್ತು ಅಚ್ಚರಿಗೆ ಕಾರಣವಾಗಿದೆ.