ಬಳ್ಳಾರಿ,ಮೇ.20,ಎ ಐ ಕೆ ಕೆ ಎಂ ಎಸ್ ರೈತ ಸಂಘಟನೆಯ ರಾಜ್ಯಾದ್ಯಂತ ಪ್ರತಿಭಟನೆ ಪ್ರಯುಕ್ತ ನಗರದ ಗಾಂಧೀ ಭವನದಿಂದ ಜಿಲ್ಲಾಧಿಕಾರಿ ಕಛೇರಿಯವರೆ ಮೆರವಣಿಗೆ ಮೂಲಕ ತೆರೆಳಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಅಧ್ಯಕ್ಷ ಗೋವಿಂದ್ ಮಾತನಾಡುತ್ತಾ ಜಿಲ್ಲೆಯ 5 ತಾಲ್ಲೂಕುಗಳು ಸೇರಿದಂತೆ 223 ತಾಲೂಕುಗಳನ್ನು ಬರ ಪ್ರದೇಶ ಎಂದು ಘೋಷಣೆ ಮಾಡಿದ್ದಾರೆ, ಆದರೆ ಇದು ಬರೀ ಘೋಷಣೆಯಾಗಿಯೇ ಉಳಿದಿರುವುದು ದುರಂತವಾಗಿದೆ. ಬರ ಕಾರ್ಯದಡಿ ಬೆಳೆ ನಷ್ಟ ಪರಿಹಾರ ಒದಗಿಸಬೇಕು, ಎಲ್ಲಾ ಬ್ಯಾಂಕುಗಳಲ್ಲಿನ ರೈತರ ಸಾಲ ಮನ್ನಾ ಮಾಡಬೇಕು, ಇಂದು 1,920 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ, ಇದನ್ನು ಬಗೆಹರಿಸಬೇಕು. ದನ-ಕರುಗಳಿಗೆ ಮೇವಿನ ಬ್ಯಾಂಕುಗಳನ್ನು ನಿರ್ಮಿಸುವುದು, ನರೇಗಾ ಯೋಜನೆಯಡಿ ಪ್ರತಿ ಕುಟುಂಬಕ್ಕೆ 200 ಕೆಲಸ ಕೊಟ್ಟು, 600 ಕೂಲಿ ಕೊಡಬೇಕು ಆಗ ಮಾತ್ರ ಈ ಬರ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯ, ಈ ಕಡೆಯವನ್ನು ಈ ಕೂಡಲೇ ಸರ್ಕಾರ ಕೈಗೆತ್ತಿಕೊಳ್ಳಬೇಕು ಎಂದರು.
ಪ್ರತಿಭಟನೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ ಮಾತನಾಡುತ್ತಾ ಇಂದು ರಾಜ್ಯದಲ್ಲಿ ಯಾವತ್ತೂ ಎದುರಾಗಿರದನಂತಹ ಬರ ಎದುರಾಗಿದೆ. ಇದನ್ನು ಆಳುವ ಸರ್ಕಾರಗಳು ಯುದ್ದೋಪಾದಿಯಲ್ಲಿ , ಸಮರಶೀಲವಾಗಿ ನಿಭಾಯಿಸುವುದನ್ನು ಬಿಟ್ಟು ಇಂದು ಕೇಂದ್ರದ ಮೇಲೆ ರಾಜ್ಯ, ರಾಜ್ಯದ ಮೇಲೆ ಕೇಂದ್ರ ದೋಷಾರೋಪದಲ್ಲಿ ಮುಳುಗಿ, ಚುನಾವಣಾ ರಾಜಕೀಯ ಮಾಡುತ್ತಿರುವುದು ಈ ದೇಶದ ರೈತ ಸಂಕುಲಕ್ಕೆ ಮಾಡುವ ಅನ್ಯಾಯವಾಗಿದೆ, 16 ಲಕ್ಷ ಕೋಟಿಗಳಷ್ಟು ಶ್ರೀಮಂತರ ಸಾಲ ಮನ್ನಾ ಮಾಡುವ ಕೇಂದ್ರದ ಮೋದಿ ಸರ್ಕಾರಕ್ಕೆ , ರೈತರಿಗೆ ನೀಡಲು ಹಣ ಇಲ್ಲ ಎನ್ನುವ ವಾದ , ಅವರ ನಿಷ್ಠೆ ಯಾರ ಪರವಾಗಿದೆ ಎನ್ನುವುದನ್ನು ತೋರಿಸುತ್ತಿದೆ, ಕಾಂಗ್ರೆಸ್, ಬಿಜೆಪಿ ಗಳು ಚುನಾವಣಾ ರಾಜಕೀಯ ಮಾಡುತ್ತಾರೆ ಒರೆತು, ಜನಪರ ಕಾರ್ಯವಲ್ಲ ಎಂಬುದನ್ನು ನಾವು ಅವರ ಕೆಲಸಗಳಿಂದ ಮನನ ಮಾಡಿಕೊಂಡು , ನಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರಕ್ಕಾಗಿ ಬಲಿಷ್ಠ ಚಳುವಳಿ ಕಟ್ಟಬೇಕು, ಚಳುವಳಿಗಳಿಂದ ಮಾತ್ರ ಬದಲಾವಣೆ ಸಾಧ್ಯ, ಚುನಾವಣೆಗಳಿಂದ ಅಲ್ಲ , ಎಂಬುದನ್ನು ನಾವು ಗ್ರಹಿಸಬೇಕು. ಆದ್ದರಿಂದ ಈ ಕೂಡಲೇ ಸರ್ಕಾರ ಬರ ಪರಿಹಾರ ಕಾರ್ಯಗಳನ್ನು ಕೈಗೊಳ್ಳದಿದ್ದರೆ ಬಲಿಷ್ಠ ಹೋರಾಟಕ್ಕೆ ರಾಜ್ಯದ ರೈತರು ಸಿದ್ದರಾಗಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಸದಸ್ಯರಾದ ಈ.ಹನುಮಂತಪ್ಪ, ಜಿಲ್ಲಾ ಉಪಾಧ್ಯಕ್ಷ ಬಸಣ್ಣ , ಯುವಜನ ಮುಖಂಡ ಕೋಳೂರು ಪಂಪಾಪತಿ ಮಾತನಾಡಿದರು. ಬಳ್ಳಾರಿ ತಾಲೂಕು ಅಧ್ಯಕ್ಷ ಈರಣ್ಣ, ಕುರುಗೋಡು ತಾಲೂಕು ಅಧ್ಯಕ್ಷ ಲಿಂಗಪ್ಪ, ಕಾರ್ಯದರ್ಶಿ ಬಸವರಾಜ್, ಜಿಲ್ಲಾ ಸಮಿತಿ ಸದಸ್ಯರಾದ ಅನಿಲ್, ರೈತರಾದ ರೆಹಮಾನ್, ಹೊರಗಳ ಮನೆ ಹನುಮಂತಪ್ಪ, ಕಾಳಪ್ಪ, ಬೈರಾಪುರ ಹನುಮಂತಪ್ಪ, ರುದ್ರಯ್ಯ, ಎಸ್ ಕಾಳಿದಾಸ, ಹೊನ್ನೂರಸ್ವಾಮಿ, ಹರಿಜನ ಹನುಮಂತಪ್ಪ, ಸೇರಿದಂತೆ ಇತರರು ಉಪಸ್ಥಿತರಿದ್ದರು.