ಆನೆ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ: ಕೇಂದ್ರ ಬರ ಪರಿಹಾರಕ್ಕೆ ರಾಜ್ಯ ಕಾಂಗ್ರೆಸ್ ಕಿಡಿ

Ravi Talawar
ಆನೆ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ: ಕೇಂದ್ರ ಬರ ಪರಿಹಾರಕ್ಕೆ ರಾಜ್ಯ ಕಾಂಗ್ರೆಸ್ ಕಿಡಿ
WhatsApp Group Join Now
Telegram Group Join Now

ಬೆಂಗಳೂರು,27: ರಾಜ್ಯಕ್ಕೆ ಕೇಂದ್ರ ಸರ್ಕಾರ ಕೇವಲ 3,454 ಕೋಟಿ ನೆರವು ಬಿಡುಗಡೆ ಮಾಡಿರುವ ಬಗ್ಗೆ ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದೆ. ರಾಜ್ಯ ಸರ್ಕಾರ 18,172 ಕೋಟಿ ರೂ. ಬರ ಪರಿಹಾರಕ್ಕಾಗಿ ಬೇಡಿಕೆ ಇಟ್ಟಿತ್ತು. ಆದ್ರೆ ಕೇಂದ್ರ ಸರ್ಕಾರ ಕೇವಲ 3,454 ಕೋಟಿ ಮಾತ್ರ ಬಿಡುಗಡೆ ಮಾಡಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ.

‘ಬರ ಪರಿಹಾರದಲ್ಲಿ ಕೇಂದ್ರ ಸರ್ಕಾರದ ಮೋಸದ ಕಣ್ಣಾಮುಚ್ಚಾಲೆ ಆಟ ಮುಂದುವರೆದಿದೆ. ಸುಪ್ರೀಂ ಕೋರ್ಟಿನ ಆದೇಶವನ್ನು ಪಾಲಿಸಿದಂತೆಯೂ ಇರಬೇಕು, ಕರ್ನಾಟಕಕ್ಕೆ ಅನ್ಯಾಯ ಆಗುವಂತೆಯೂ ಇರಬೇಕು ಎಂಬ ಚಾಣಾಕ್ಷತನ ತೋರಿದೆ. ಕರ್ನಾಟಕ ಬೇಡಿಕೆ ಇಟ್ಟಿದ್ದು 18,172 ಕೋಟಿ, ಆದರೆ ಆನೆ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ ಎನ್ನುವಂತೆ ಕೇವಲ 3,454 ಕೋಟಿ ಮಾತ್ರ ಬಿಡುಗಡೆ ಮಾಡಿ ತನ್ನ ಕರ್ನಾಟಕ ದ್ವೇಷ ಮುಂದುವರೆಸಿದೆ’ ಎಂದು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಕಾಂಗ್ರೆಸ್​ ಪೋಸ್ಟ್ ಮಾಡಿದೆ.

ಇನ್ನು ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯ ಬಿಜೆಪಿ ಧನ್ಯವಾದ ತಿಳಿಸಿದೆ. ‘ಕರ್ನಾಟಕದಲ್ಲಿ ಕಂಡು ಕೇಳರಿಯದಂತಹ ಬರ ಉಂಟಾದರೂ, ರೈತರಿಗೆ ಬಿಡಿಗಾಸು ಮಧ್ಯಂತರ ಪರಿಹಾರ ನೀಡದೇ ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣ ಓಲೈಕೆ ರಾಜಕಾರಣದಲ್ಲಿ ನಿರತವಾಗಿತ್ತು. ಆದರೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲಿಯೂ ಕನ್ನಡಿಗರ ಸಂಕಷ್ಟಕ್ಕೆ ನೆರವಾಗಿರುವ ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕಕ್ಕೆ 3,454 ಕೋಟಿ ಬರ ಪರಿಹಾರ ನೀಡುವ ಮೂಲಕ ಸಮಸ್ತ ಕನ್ನಡಿಗರ ಹಿತ ಕಾಯುವ ಕೆಲಸ ಮಾಡಿದ್ದಾರೆ. ನಾಡಿನ ಸಮಸ್ತ ಕನ್ನಡಿಗರ ಪರವಾಗಿ ಪ್ರಧಾನಿ ಮೋದಿ ಅವರಿಗೆ ತುಂಬು ಹೃದಯದ ಧನ್ಯವಾದಗಳು’ ಎಂದು ರಾಜ್ಯ ಬಿಜೆಪಿ ಪೋಸ್ಟ್ ಮಾಡಿದೆ.

ಬರ ಪರಿಹಾರ ಕೋರಿ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಮನವಿ ಮಾಡಿತ್ತು. ಆದರೆ, ಬರ ಪರಿಹಾರ ಬಿಡುಗಡೆ ಮಾಡಲು ಕೇಂದ್ರ ವಿಳಂಬ ಮಾಡಿತ್ತು. ಈ ಹಿನ್ನೆಲೆಯಲ್ಲಿ ಪರಿಹಾರ ನೆರವು ಬಿಡುಗಡೆ ಮಾಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಬರ ಪರಿಹಾರ ಬಿಡುಗಡೆ ಮಾಡಿದೆ.

 

WhatsApp Group Join Now
Telegram Group Join Now
Share This Article