ಇಂಡಿ: ತಾಲೂಕಿನ ಸುಕ್ಷೇತ್ರ ಲಚ್ಯಾಣದ ಲಿಂಗೈಕ್ಯ ಶ್ರೀ ಸಿದ್ಧಲಿಂಗ ಮಹಾರಾಜರ ಕಮರಿಮಠದಲ್ಲಿ ಸದ್ಗುರು ಶ್ರೀ ಶಂಕರಲಿಂಗೇಶ್ವರ ಮಹಾರಥೋತ್ಸವದ ಅಂಗವಾಗಿ ಏಪ್ರೀಲ್ ೬ ರಿಂದ ೧೧ರ ವರೆಗೆ ವಿವಿಧ ಧಾರ್ಮಿಕ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಏ. ೬ ರಂದು ಜಾನುವಾರ ಜಾತ್ರೆಗೆ ಚಾಲನೆ ನೀಡಲಾಗುವದು. ಏ. ೭ ರಂದು ಬೆಳಿಗ್ಗೆ ೮ ಗಂಟೆಗೆ ಮಠದ ಆವರಣದಲ್ಲಿ ಜರುಗುವ ಷಟಸ್ಥಲ ಧ್ವಜಾರೋಹಣವನ್ನು ಜಕನೂರಿನ ಶ್ರೀ ಸಿದ್ಧಲಿಂಗ ದೇವರು ನೇರವೇರಿಸಲಿದ್ದಾರೆ. ನಂತರ ೧೦.೩೦ ಗಂಟೆಗೆ “ಸರ್ವ ಧರ್ಮದ ಸರಳ ಸಾಮೂಹಿಕ ವಿವಾಹ” ಕಾರ್ಯಕ್ರಮ ನೆರವೇರುವುದು.
ಬಂಥನಾಳ ಹಾಗೂ ಲಚ್ಯಾಣ ಮಠದ ಪೀಠಾಧೀಶರಾದ ಶ್ರೀ ಡಾ. ವೃಷಭಲಿಂಗೇಶ್ವರ ಮಹಾಶಿವಯೋಗಿಗಳು, ಯರನಾಳದ ವಿರಕ್ತಮಠದ ಶ್ರೀ ಗುರುಸಂಗನಬಸವ ಮಹಾಸ್ವಾಮೀಜಿ, ಹಳಿಂಗಳಿಯ ಕಮರಿಮಠದ ಶ್ರೀ ಶಿವಾನಂದ ಮಹಾಸ್ವಾಮೀಜಿ, ಮುಗಳಖೋಡದ ಶ್ರೀಡಾ. ಮುರುಘರಾಜೇಂದ್ರ ಮಹಾಸ್ವಾಮೀಜಿ, ಜಕನೂರಿನ ಶ್ರೀ ಸಿದ್ಧಲಿಂಗ ದೇವರು, ಚಿಕ್ಕಪಡಸಲಗಿಯ ಮಾತೋಶ್ರೀ ಅಕ್ಕಮಹಾದೇವಿ ಅಮ್ಮನವರು, ಹೂವಿನ ಹಿಪ್ಪರಗಿಯ ಮಾತೋಶ್ರೀ ದ್ರಾಕ್ಷಾಯಣಿ ಅಮ್ಮನವರು ಹಾಗೂ ತುಂಗಳದ ಮಾತೋಶ್ರೀ ಅನಸೂಯಾದೇವಿ ಅಮ್ಮನವರು ಸಾನಿಧ್ಯವಹಿಸಲಿದ್ದಾರೆ.
ಮುಖ್ಯ ಅತಿಥಿಯಾಗಿ ಶಾಸಕ ಯಶವಂತರಾಯಗೌಡ ಪಾಟೀಲ, ಸಿಪಿಐ ಆನಂದ ಮೇತ್ರಿ, ಸ್ಥಳೀಯ ಜವಳಿ ವ್ಯಾಪಾರಸ್ಥರಾದ ಮಂಗಲಾಬಾಯಿ ಜೀವಂದರ ಶಹಾ ಭಾಗವಹಿಸಲಿದ್ದಾರೆ.
ಸಂಜೆ ೮ ಗಂಟೆಗೆ ಬಂಥನಾಳದ ಶ್ರೀ ವೃಷಭಲಿಂಗೇಶ್ವರ ಪಲ್ಲಕ್ಕಿ ಪುರ ಪ್ರವೇಶ ಕಾರ್ಯಕ್ರಮ. ರಾತ್ರಿ ೯ ಗಂಟೆಗೆ ಅಗ್ನಿ ಪ್ರಜ್ವಲನ, ೧೦ ಗಂಟೆಗೆ ಮದ್ದು ಸುಡುವ ಕಾರ್ಯಕ್ರಮ, ೧೦.೩೦ಕ್ಕೆ ಸ್ಥಳೀಯ ಶ್ರೀ ಸಿದ್ಧಲಿಂಗೇಶ್ವರ ನಾಟ್ಯ ಸಂಘದಿಂದ “ ಶ್ರೀ ರೇಣುಕಾ ಯಲ್ಲಮ್ಮದೇವಿ” ಎಂಬ ಭಕ್ತಿ ಪ್ರದಾನ ನಾಟಕ ಪ್ರದರ್ಶನಗೊಳ್ಳಲಿದೆ.
ಏ. ೮ ರಂದು ಬೆಳಿಗ್ಗೆ ೧೧ ಗಂಟೆಗೆ ಶ್ರೀ ಡಾ. ವೃಷಭಲಿಂಗೇಶ್ವರ ಮಹಾಶಿವಯೋಗಿಗಳ ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಅಗ್ನಿ ಶಮನ ಕಾರ್ಯಕ್ರಮ ನಡೆಯಲಿದೆ. ನಂತರ ಖ್ಯಾತ ಕಲಾವಿದೆ ವಿದ್ಯಾಶ್ರೀ ಮಸಬಿನಾಳ ಹಾಗೂ ಲಕ್ಷ್ಮಣ ಖಣದಾಲ ಅವರಿಂದ ಗಿ ಗೀ ಪದಗಳು ಜರುಗಲಿವೆ. ಬಳಿಕ ಸ್ಥಳೀಯ ಹಾಗೂ ಅಗರಖೇಡ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ, ಇಂಡಿ ಪಟ್ಟಣದ ಸ್ಪಂದನಾ ಆಸ್ಪತ್ರೆ ಹಾಗೂ ಶ್ರೀ ಮಠದ ಸಹಯೋಗದಲ್ಲಿ ಉಚಿತ ಬಿಪಿ, ಶುಗರ ರೋಗ ತಪಾಸಣೆ ನಡೆಯಲಿದೆ. ಸಂಜೆ ೫ ಗಂಟೆಗೆ ಬಂಥನಾಳದ “ಶ್ರೀ ಶಂಕರಲಿಂಗೇಶ್ವರ ಶಿವಯೋಗಿಗಳ ಮಹಾರಥೋತ್ಸವ” ನೆರವೇರಲಿದೆ. ಬಳಿಕ ರಾತ್ರಿ ೧೦ ಗಂಟೆಗೆ ಖ್ಯಾತ ಕಲಾವಿದ ಸಿದ್ದು ನಾಲವತವಾಡ ಸಾರಥ್ಯದ ಶ್ರೀ ವೀರೇಶ್ವರ ನಾಟ್ಯ ಸಂಘದಿಂದ “ಬಂಜೆಯ ತೊಟ್ಟಿಲು” ಅರ್ಥಾತ್ ಶಕ್ತಿಯ ಚೆಲ್ಲಾಟ ಸಂಗವ್ವನ ಹಾರಾಟ ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ.
ಏ.೯ ರಂದು ಬೆಳಿಗ್ಗೆ ೯ಕ್ಕೆ ಪ್ರಸಿದ್ಧ ಜಂಗಿ ಕುಸ್ತಿ ಪಂದ್ಯ ನಡೆಯಲಿದೆ. ಬಳಿಕ ಕಲಾವಿದೆ ವಿದ್ಯಾಶ್ರೀ ಮಸಬಿನಾಳ ಹಾಗೂ ಲಕ್ಷ್ಮಣ ಖಣದಾಲ ಅವರಿಂದ ಗಿ ಗೀ ಪದಗಳು ಜರುಗಲಿವೆ. ಸಂಜೆ ೪ ಗಂಟೆಗೆ ಸೋಲಾಪುರದ ಶ್ರೀಮಂತ ಬಾಬಾಸಾಹೇಬ ವಾರದ ಕುಟುಂಬದವರು ಕೊಡಮಾಡಿದ ಬೆಳ್ಳಿ ಗಧೆಯ ಕುಸ್ತಿ ಪಂದ್ಯ ನಡೆಯಲಿದೆ. ಸ್ಥಳೀಯ ಕುಸ್ತಿಪಟು ಚಂದಪ್ಪ ಯಳಮೇಲಿ ಬೆಳ್ಳಿ ಗಧೆಯ ಸೇವೆ ಸಲ್ಲಿಸಲಿದ್ದಾರೆ.
ಏ. ೧೦ ರಂದು ಉತ್ತಮ ರಾಸುಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಗುವದು ಎಂದು ಶ್ರೀ ಮಠದ ಪ್ರಕಟಣೆ ತಿಳಿಸಿದೆ.


