ಬೆಳಗಾವಿ,ಮೇ.12: ಭಗವಾನ್ ಬುದ್ಧರ ಬುದ್ಧ ಧಮ್ಮವನ್ನು ನಾವು ಅನುಸರಿಸಿಕೊಂಡು ಜೀವನ ನಡೆಸಿದರೆ ನಮ್ಮ ಜೀವನ ಪರಿಶುದ್ಧವಾಗುತ್ತದೆ ಎಂದು ಸಹಾಯಕ ಪ್ರಾಧ್ಯಾಪಕರಾದ ಸಾಹುಕಾರ ಕಾಂಬಳೆ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಸೋಮವಾರ (ಮೇ.12 ) ನಗರದ ಸದಾಶಿವ ನಗರದಲ್ಲಿನ ಬುದ್ಧ ವಿಹಾರದಲ್ಲಿ ನಡೆದ ಶ್ರೀ ಭಗವಾನ ಬುದ್ಧ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಬೌದ್ಧ ಧರ್ಮವನ್ನು ನಾವೆಲ್ಲರು ಪಾಲಿಸಬೇಕು. ಬುದ್ಧ ಧರ್ಮದಿಂದ ನಮ್ಮ ಜೀವನ ಶೈಲಿ ಉತ್ತಂಗಕ್ಕೇ ಏರುತ್ತದೆ. ಬುದ್ಧರು ತಮ್ಮ ಜ್ಞಾನದಿಂದ ಸಾಮಾನ್ಯ ಜನರನ್ನು ತಲುಪಿ ಅಷ್ಟಾಂಗ ಮಾರ್ಗಗಳ ಬಗ್ಗೆ ತಿಳಿಸಿಕೊಟ್ಟು ಉತ್ತಮ ಜೀವನ ನಡೆಸಲು ದಾರಿ ತೋರಿಸಿಕೊಟ್ಟವರು.
ಬಾಬಾಸಾಹೇಬ ಅಂಬೇಡ್ಕರ್ ರವರ ಬುದ್ಧ ಮತ್ತು ಆತನ ಧಮ್ಮ ಪುಸ್ತಕವನ್ನು ಓದಬೇಕು. ಬುದ್ಧರ ಬಗ್ಗೆ ಆಳವಾದ ಅಧ್ಯಯನ ಮಾಡಿ ಅವರ ತತ್ವಗಳನ್ನು ಪಾಲಿಸಬೇಕು ಎಂದು ಹೇಳಿದರು.
ದ್ವೇಷವನ್ನು ದ್ವೇಷದಿಂದ ಗೆಲ್ಲಲು ಸಾಧ್ಯವಿಲ್ಲ; ಪ್ರೀತಿಯಿಂದ ಮಾತ್ರ ಸಾಧ್ಯ ಎಂದು ಭಗವಾನ ಬುದ್ಧರು ಪ್ರೀತಿಯ ಸಂದೇಶವನ್ನು ತಿಳಿಸಿದ್ದಾರೆ. ದುರಾಸೆಯೇ ದುಃಖಕ್ಕೆ ಮೂಲ ಎಂದು ಹೆಳಿದ್ದಾರೆ. ಜಗತ್ತಿನಲ್ಲಿರುವ ದುಃಖಗಳಿಗೆ ತಮ್ಮ ಅಷ್ಟಾಂಗ ಮಾರ್ಗಗಳಿಂದ ಪರಿಹಾರ ಹುಡುಕಿಕೊಟ್ಟವರು ಭಗವಾನ ಬುದ್ಧರು ಎಂದು ಸಾಹುಕಾರ ಕಾಂಬಳೆ ಹೇಳಿದರು.
ಭಗವಾನ ಬುದ್ಧರಿಗೆ ಒಬ್ಬ ವ್ಯಕ್ತಿ ಕೇಳುತ್ತಾರೆ ನೀವು ಧ್ಯಾನದಿಂದ ಏನನ್ನು ಪಡೆದುಕೊಂಡಿದ್ದಿರಿ ಎಂದು ಆಗ ಭಗವಾನ ಬುದ್ಧರ ಉತ್ತರ; ಗಳಿಸಿಕೊಂಡಿರುವುದಕ್ಕಿಂತ ಕಳೆದುಕೊಂಡಿರುವುದೇ ಹೆಚ್ಚು. ಕಾಮ, ಕ್ರೋಧ, ಮದ, ಮತ್ಸರ ಎಲ್ಲವನ್ನು ಕಳೆದುಕೊಂಡಿದ್ದೇನೆ ಎಂದು ಹೇಳಿದರು. ಹುಟ್ಟಿದ ದಿನ ಜ್ಞಾನೋದಯ ಮತ್ತು ಪರಿನಿರ್ವಾಣ ಹೊಂದಿದ ದಿನವೇ ಶುದ್ಧ ಶುಕ್ಲ ಬೌದ್ಧ ಪೂರ್ಣಿಮೆ ದಿನ ಎಂದು ಕಾಂಬಳೆ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಜಿಲ್ಲಾ ಪಂಚಾಯತ ಸಹಾಯಕ ಕಾರ್ಯದರ್ಶಿ ರಾಹುಲ್ ಕಾಂಬಳೆ, ಸಮಾಜದ ಮುಖಂಡರಾಸ ಮಲ್ಲೇಶ ಚೌಗಲೆ, ವಾಯ್.ಪಿ.ಗಡಿನಾಯಕ, ಬಸವರಾಜ ರಾಯವ್ವಗೋಳ, ಯಲ್ಲಪ್ಪ ಕಾಂಬಳೆ, ಸಿದ್ರಾಯ ಮೇತ್ರಿ, ಕಲ್ಲಪ್ಪ ಕಾಂಬಳೆ, ಸುನಂದಾ ವಾಗಮೋರೆ, ರಾಜೇಂದ್ರ ಕಾಂಬಳೆ, ನಾಮದೇವ ಬಿಲಕರ, ಮಲ್ಲಪ್ಪ ಕಾಂಬಳೆ, ಮಲ್ಲೇಶ ಕುರಂಗೆ, ದೀಪಕ ಮೇತ್ರಿ ಹಾಗೂ ಮತ್ತಿತರು ಉಪಸ್ಥಿತರಿದ್ದರು.
***