ಬೆಂಗಳೂರು: ನಿತ್ಯವೂ ಹಲವು ಸಮಸ್ಯೆಗಳಲ್ಲಿ ಸಿಲುಕಿ ಪರಿತಪಿಸುವ ಮನುಷ್ಯನಿಗೆ ಜ್ಞಾನದಿಂದಲೇ ಪರಿಹಾರ ಎಂದು ನಿವೃತ್ತ ಪ್ರಾಚಾರ್ಯ ಎಸ್ಆರ್ ಹಿರೇಮಠ ಹೇಳಿದರು. ನಗರದ ಸಹ್ಯಾದ್ರಿನಗರದಲ್ಲಿ ನಿವೃತ್ತ ಪ್ರಾಚಾರ್ಯರು ಮತ್ತು ಶಿಕ್ಷಣ ಕ್ಷೇತ್ರದ ಸ್ನೇಹ ಬಳಗ ಸೆ.5ರಂದು ಹಮ್ಮಿಕೊಂಡಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನಾಚರಣೆಯಲ್ಲಿ ಎಸ್ಆರ್ ಹಿರೇಮಠ ಅವರು ಮಾತನಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಹಿರೇಮಠ ಅವರು, ಮೆದುಳು ಮತ್ತು ಹೃದಯ ಚಟುವಟಿಕೆಯಿಂದಿರಲು ಪೂರಕ ವಾತಾವರಣವನ್ನು ಕಲ್ಪಿಸುವ ಶಕ್ತಿಯೂ ಜ್ಞಾನಕ್ಕಿದೆ ಎಂದು ಹೇಳಿದರು.ರಾಷ್ಟ್ರಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ಶರಣಗೌಡ ಎಸ್ ಪಾಟೀಲ ಅವರು ಮಾತನಾಡಿ, ಡಾ. ರಾಧಾಕೃಷ್ಣನ್ ಅವರ ಬದುಕು ಪ್ರತಿಯೊಬ್ಬರಿಗೂ ಮಾದರಿ. ರಾಷ್ಟ್ರಪತಿಯಾಗಿ ಅಷ್ಟೇ ಅಲ್ಲದೇ ಒಬ್ಬ ತತ್ವಜ್ಞಾನಿಯಾಗಿಯೂ ವಿಶ್ವದ ಗಮನ ಸೆಳೆಯುವಲ್ಲಿ ರಾಧಾಕೃಷ್ಣನ್ ಅವರು ಯಶಸ್ವಿಯಾದರು ಎಂದು ಬಣ್ಣಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗುರುವಿನ ಗುಲಾಮನಾಗುವ ತನಕ ದೊರೆಯದೆನ್ನ ಮುಕುತಿ ಅನ್ನುವಂತೆ ಪ್ರತಿ ಕ್ಷೇತ್ರದಲ್ಲಿ ಗುರುವಿನ ಮಾರ್ಗದರ್ಶನ ಅಗತ್ಯ ಎಂದರು. ಅದರಲ್ಲೂ ಶಿಕ್ಷಣ ಕ್ಷೇತ್ರದಲ್ಲಿ ಉತ್ಸಾಹವೇ ಯೌವ್ವನ, ನಿರುತ್ಸಾಹವೇ ವೃದ್ಧಾಪ್ಯ ಎಂಬುದನ್ನು ಶಿಕ್ಷಕರು ಅರಿತುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಎಸ್ಎಸ್ ಪಾಟೀಲ, ಪಿಎಫ್ ಅಂಜಿ, ರಾಮದುರ್ಗ, ಶಿವಕಾಂತ್, ನಿವೃತ್ತ ಎಸ್ಪಿ ಕಾಂಬಳೆ, ಶರಣಗೌಡ, ಗೋಡಬೋಲೆ, ರಮೇಶ, ಕುಕ್ಕರೆ, ಆಕಾಶ, ಶಂಕರ ಹೆಗಡೆ, ಇತರರು ಉಪಸ್ಥಿತರಿದ್ದರು.