ಬೆಂಗಳೂರು, ಮೇ.30: ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆಗಳು ನಡೆಯುತ್ತಿವೆ. ಇತ್ತೀಚೆಗಷ್ಟೇ ಸರ್ಕಾರಿ ಶಾಲೆಗಳಲ್ಲಿ ಎಲ್ಕೆಜಿ, ಯುಕೆಜಿ ಆರಂಭಿಸಬೇಕು ಎಂದು ಸರ್ಕಾರ ಆದೇಶ ಹೊರಡಿಸಿತ್ತು. ಇದೀಗ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಪ್ರಸ್ತುತ 2024-25ನೇ ಶೈಕ್ಷಣಿಕ ಸಾಲಿನಿಂದ ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 1ರಿಂದ 10ನೇ ತರಗತಿಯ ಮಕ್ಕಳಿಗೆ ಸ್ಪೋಕನ್ ಇಂಗ್ಲೀಷ್ ತರಗತಿಗಳನ್ನ ನಡೆಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮುಂದಾಗಿದೆ.
ವಾರದಲ್ಲಿ ಒಂದು ದಿನ ಅಂದ್ರೆ ಪ್ರತಿ ಶನಿವಾರದಂದು ವಿದ್ಯಾರ್ಥಿಗಳಿಗೆ 40 ನಿಮಿಷದ ಸ್ಪೋಕನ್ ಇಂಗ್ಲೀಷ್ ತರಗತಿಗಳನ್ನ ನಡೆಸಲು ಶಿಕ್ಷಣ ಇಲಾಖೆ ಪ್ಲ್ಯಾನ್ ಮಾಡಿದೆ. ಈ ಮೂಲಕ ಸರ್ಕಾರಿ ಶಾಲೆಯ ಮಕ್ಕಳಿಗೆ ಇಂಗ್ಲಿಷ್ ಇನ್ಮುಂದೆ ಕಬ್ಬಿಣದ ಕಡಲೆಯಲ್ಲ. ಪಿಯುಸಿ ಮುಗಿದ ಬಳಿಕ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಭಯ ಪಡೋ ಅಗತ್ಯ ಇರಲ್ಲ. ಕನ್ನಡ ಮಾಧ್ಯಮ ಮಕ್ಕಳು ಬದುಕು ಕಟ್ಟಿಕೊಳ್ಳಲು ಇಂಗ್ಲಿಷ್ ಬಾರದೇ ಪರದಾಡುತ್ತಿದ್ದರು ಸದ್ಯ ಈ ಮಹತ್ವದ ಹೆಜ್ಜೆ ವಿದ್ಯಾರ್ಥಿಗಳ ಮುಂದಿನ ಬದುಕಿಗೆ ಸಹಾಯವಾಗಲಿದೆ.
ಸಂಭಾಷಣೆ, ನಾಟಕ, ಪಾತ್ರಾಭಿನಯ, ಕಥೆ ಹೇಳುವುದು, ಪರಿಸ್ಥಿತಿ ವಿವರಣೆ, ಅನುಭವಗಳ ಹಂಚಿಕೆ ಈ ಎಲ್ಲಾ ಚಟುವಟಿಕೆಗಳು ಸ್ಪೋಕನ್ ಇಂಗ್ಲೀಷ್ ತರಗತಿಗಳಲ್ಲಿ ಇರಲಿವೆ. ಸ್ಪೋಕನ್ ಇಂಗ್ಲೀಷ್ ಪ್ರಸ್ತಾವನೆಯನ್ನ ಶಿಕ್ಷಣ ಇಲಾಖೆಯ 2024-25 ರ ಶೈಕ್ಷಣಿಕ ಮಾರ್ಗಸೂಚಿಯಲ್ಲಿ ಅಳವಡಿಸಲಾಗಿದೆ.