ರನ್ನ ಬೆಳಗಲಿ: ಏ.೧೨., ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಸುಕ್ಷೇತ್ರ ಮಹಾ ಕವಿ ರನ್ನನ ಜನ್ಮಸ್ಥಳವಾದ ರನ್ನ ಬೆಳಗಲಿಯ ಆರಾಧ್ಯ ದೈವರಾದ ಶ್ರೀ ಮಾರುತೇಶ್ವರ ಕಾರ್ತಿಕೋತ್ಸವ ಮತ್ತು ಶ್ರೀ ಬಂದ ಲಕ್ಷ್ಮೀ ದೇವಿಯ ಜಾತ್ರಾ ಮಹೋತ್ಸವ ಜರಗುತಿದೆ.
ಇಂದು ಮಾರುತೇಶ್ವರ ದೇವಸ್ಥಾನದಲ್ಲಿ ಹಾಲಓಕಳ್ಳಿ ವಿಜೃಂಭಣೆಯಿಂದ ಸಾಯಂಕಾಲ ಜರುಗುವುದು. ಮುಂಜಾನೆ ದೇವಸ್ಥಾನದಲ್ಲಿ ಕಾರ್ತಿಕ ಮಹೋತ್ಸವ ಊರಿನ ಸರ್ವ ಹಿರಿಯರಿಂದ ನೆರವೇರುತ್ತದೆ. ಮಾರುತೇಶ್ವರ ಕಾರ್ತಿಕ ಮಹೋತ್ಸವ ಮುಗಿದ ನಂತರವೇ ಪಟ್ಟಣದ ಆರಾಧ್ಯ ದೇವತೆಯಾದ ಶ್ರೀ ಬಂದ ಲಕ್ಷ್ಮೀ ದೇವಿಯ ರಥೋತ್ಸವದ ವೈಭವ ಜರಗುವುದು.
ನೆರೆಯ ಮುಗಳಖೋಡ ಗ್ರಾಮದ ಶ್ರೀ ಪರಮಾನಂದ ಅಜ್ಜನ ಪಲ್ಲಕ್ಕಿ, ಒಂಟುಗೋಡಿ, ಹಿಡಕಲ್ಲ ಗ್ರಾಮಗಳ ಲಕ್ಷ್ಮೀದೇವಿಯರ ಪಲ್ಲಕ್ಕಿ, ಸ್ಥಳೀಯ ದೇವಾಣದೇವತೆಗಳ ಪಲ್ಲಕ್ಕಿಗಳು ಪಾಲ್ಗೊಳ್ಳುವುವು, ವಿಶೇಷವಾಗಿ ಅತಿ ಎತ್ತರದ ಖಂಡಾಳ ಬಾಸಿಂಗ್, ನಂದಿ ಕೋಲು, ಜನಪದ ಕಲಾ ವೈಭವಗಳಾದ ಕುದುರೆ ಕುಣಿತ, ಹಲಗೆ ವಾದನ, ಸಹನಾಯಿ ವಾದನ, ಕರಡಿಮೇಳ, ಹೀಗೆ ಹತ್ತು ಹಲವು ಜನಪದ ಕಲಾ ಮೇಳಗಳ ಮಧ್ಯದಲ್ಲಿ ಶ್ರೀದೇವಿಯ ರಥೋತ್ಸವವು ಪಾದಗಟ್ಟೆಯಿಂದ ಪ್ರಾರಂಭಗೊಂಡು ದೇವಿಯ ಭವ್ಯ ಮಂದಿರದ ರಾತ್ರಿಪೂರ್ಣ ಸಾಗುವುದು ಈ ಒಂದು ಜಾತ್ರಾ ವೈಭವ ನೋಡಲು ಸುತ್ತ ಹತ್ತೂರಿನ ಗ್ರಾಮದ ಭಕ್ತರು ಸೇರಿ, ಶ್ರೀದೇವಿಗೆ ಅನೇಕ ಭಕ್ತಿ ಕಾಣಿಕೆ ಸಮರ್ಪಿಸಿ ಬೇಡಿಕೊಳ್ಳುವ ವಾಡಿಕೆ ಇದೆ.
ಮರುದಿನ ಸಾಯಂಕಾಲ ರಾಜ್ಯಮಟ್ಟದ ಕುಸ್ತಿ ಸ್ಪರ್ಧೆ ಜರುಗುತ್ತದೆ, ನಂತರ ಮರು ರಥೋತ್ಸವವು ಶ್ರೀ ಬಂದು ಲಕ್ಷ್ಮಿ ದೇವಸ್ಥಾನದ ಆವರಣ ದಿಂದ ತೇರಿನ ಮನೆವರೆಗೂ ರಾತ್ರಿ ಪೂರ್ಣ ಜರುಗುತ್ತದೆ. ಈ ಎರಡು ದಿನಗಳ ಕಾಲ ಅನೇಕ ಸ್ಥಳಗಳಲ್ಲಿ ಸ್ಥಳೀಯ ಕಲಾವಿದರಿಂದ ನಾಟಕಗಳು ಜರುಗುತ್ತವೆ, ಮತ್ತು ಜಾತ್ರೆಗೆ ಆಗಮಿಸಿದ ಸರ್ವ ಭಕ್ತಾದಿಗಳಿಗೆ ಮಹಾಪ್ರಸಾದವು ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ನಿರಂತರ ಮೂರು ದಿನಗಳ ಕಾಲ ಹಗಲು ,ರಾತ್ರಿ ಜರುಗುತ್ತದೆ. ಎಂದು ಜಾತ್ರಾ ಮಹೋತ್ಸವದ ಹಿರಿಯರು ಮಾಹಿತಿಯನ್ನು ನೀಡಿದರು.