ಬೆಳಗಾವಿ := ಬಿಜೆಪಿ ಮುಖಂಡರು ಬೆಳಗಾವಿ ನಗರದ ಕೆ.ಎಲ್.ಇ ಆವರಣದ ಶಿವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.ಇದೇ ವೇಳೆ ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ ಅವರು ಮಾತನಾಡಿ ಜನವರಿ 2026ಕ್ಕೆ ಘಜನಿ ಮಹಮದ್ ಗುಜರಾತಿನ ಸೋಮನಾಥ ಮಂದಿರದ ಮೇಲೆ ದಾಳಿ ನಡೆಸಿ 1,000 ವರ್ಷ ಆಗುತ್ತಿದೆ. 1026 ಜನವರಿಯಲ್ಲಿ ಘಜನಿ ಮಹಮದ್ ದಾಳಿ ಮಾಡಿದ್ದನು. ಕಳೆದ ಒಂದು ಸಾವಿರ ವರ್ಷದಲ್ಲಿ ಸೋಮನಾಥ ಮಂದಿರದ ಬಗ್ಗೆ ಜನತೆಯ ಸಹನಶೀಲತೆ, ನಿರಂತರತೆ, ಪುನರುತ್ಥಾನದ ಯಶೋಗಾಥೆಯನ್ನು ನೆನಪಿಸಿಕೊಳ್ಳಲು ಈ ವರ್ಷ ‘ಸೋಮನಾಥ ಪರ್ವ’ವನ್ನು ಆಯೋಜಿಸಲು ನಿಶ್ಚಯಿಸಲಾಗಿದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ ಮಾತನಾಡಿ 2026ಕ್ಕೆ ಮಂದಿರ ಮರುನಿರ್ಮಾಣವಾಗಿ 75 ವರ್ಷ ಪೂರ್ಣಗೊಳ್ಳಲಿದೆ. 1, ಮೇ 1951ರಂದು ಅಂದಿನ
ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ ಅವರ ಉಪಸ್ಥಿತಿಯಲ್ಲಿ ಮಂದಿರವನ್ನು ಭಕ್ತರಿಗೆ ಮತ್ತೆ ತೆರೆಯಲಾಯಿತು.
1026ರ ಈ ಹೃದಯವಿದ್ರಾವಕ ಘಟನೆಯನ್ನು ನೆನಪಿಸಿಕೊಳ್ಳುತ್ತಾ ಮತ್ತು ಸೋಮನಾಥದ ಅಖಂಡತೆಗೆ ನಮಿಸುತ್ತಾ, ಎಲ್ಲ ಶಿವಾಲಯಗಳಲ್ಲಿ `ಓಂಕಾರ ಮಂತ್ರ ಜಪಿಸಲು ನಿರ್ಧರಿಸಲಾಗಿದೆ. ಎಲ್ಲಾ ದೇಶವಾಸಿಗಳು ಈ ಜನ-ಅಭಿಯಾನದಲ್ಲಿ ಪಾಲ್ಗೊಂಡು, ತಮ್ಮ ಹತ್ತಿರದ ಶಿವಾಲಯಗಳಲ್ಲಿ ಮಂತ್ರ ಪಠಣದಲ್ಲಿ ಭಾಗವಹಿಸುವುದು ಇದರ ಉದ್ದೇಶವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಮಾದಮ್ಮನವರ, ಸಂತೋಷ ದೇಶನೂರ,ಸುಭಾಷ ಸಣ್ಣವೀರಪ್ಪನವರ,ಪ್ರವೀಣ ಮಾಳೆದವರ,ಮಂಜುನಾಥ ಅಷ್ಟಗಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.


