ಬೆಂಗಳೂರು, ಜನವರಿ 24: ಅಲ್ಪ ಅರಣ್ಯವಿರುವ 16 ಜಿಲ್ಲೆಗಳಿಗೆ ವಿಶೇಷ ಯೋಜನೆ ರೂಪಿಸಲು ಸಚಿವ ಈಶ್ವರ್ ಖಂಡ್ರೆ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ವಿಕಾಸಸೌಧದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದ ಖಂಡ್ರೆ, ಬಿಸಿಲು ಹೆಚ್ಚಿರುವ ವಿಜಯಪುರ, ರಾಯಚೂರು, ಬಳ್ಳಾರಿ, ಯಾದಗಿರಿ, ಬೀದರ್ ಹಾಗೂ ಕಲಬುರಗಿ ಜಿಲ್ಲೆ ಸೇರಿದಂತೆ ಹಸಿರು ವ್ಯಾಪ್ತಿ ಕಡಿಮೆ ಇರುವ ಜಿಲ್ಲೆಗಳಲ್ಲಿ ಹೆಚ್ಚು ಸಸಿನೆಟ್ಟು ನೀರುಣಿಸಿ, ಜಿಯೋ ಟ್ಯಾಗ್ ಮಾಡಿ ಸಂರಕ್ಷಿಸಲು ಸೂಚನೆ ನೀಡಿದ್ದಾರೆ.
ಅಲ್ಪ ಅರಣ್ಯವಿರುವ 16 ಜಿಲ್ಲೆಗಳಿಗೆ ವಿಶೇಷ ಯೋಜನೆ: ಸಚಿವ ಈಶ್ವರ್ ಖಂಡ್ರೆ ಸೂಚನೆ
ರಸ್ತೆ ಬದಿ ಹೆಚ್ಚು ಗಿಡ ಬೆಳೆಸಲು ಸೂಚನೆ ನೀಡಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಹಸಿರು ಹೊದಿಕೆ ಕಡಿಮೆ ಇರುವ ಜಿಲ್ಲೆಗಳಲ್ಲಿನ ಹೆದ್ದಾರಿಗಳು, ಜಿಲ್ಲಾ ಮುಖ್ಯ ರಸ್ತೆ ಮತ್ತು ಗ್ರಾಮೀಣ ರಸ್ತೆಗಳನ್ನು ಗುರುತಿಸಿ ರಸ್ತೆಯ ಎರಡೂ ಬದಿಯಲ್ಲಿ ಸಸಿಗಳನ್ನು ನೆಟ್ಟು ಬೆಳೆಸಬೇಕು. ಅದಕ್ಕೆ ಈಗಿನಿಂದಲೇ ರಸ್ತೆಗಳನ್ನು ಗುರುತಿಸಿ, ಕಾರ್ಯಯೋಜನೆ ರೂಪಿಸುವಂತೆ ಮತ್ತು ನರ್ಸರಿಗಳಲ್ಲಿ ಎತ್ತರದ ಗಿಡ ಬೆಳೆಸಲು ಆದೇಶಿಸಿದ್ದಾರೆ.