ಬಳ್ಳಾರಿ,ಅ.25ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ-2026ರ ಮತದಾರರ ಪಟ್ಟಿ ಸಿದ್ಧಪಡಿಸುವ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅರ್ಹ ಶಿಕ್ಷಕರ ಮತದಾರರನ್ನು ನೋಂದಾಯಿಸಲು ಜಿಲ್ಲೆಯಲ್ಲಿ ‘ಮತದಾರರ ವಿಶೇಷ ಮಿಂಚಿನ ನೋಂದಣಿ ಅಭಿಯಾನ’ ಹಮ್ಮಿಕೊಳ್ಳಲಾಗಿದೆ.
ಮತದಾರರ ವಿಶೇಷ ಮಿಂಚಿನ ನೋಂದಣಿ ಅಭಿಯಾನವು ಅಕ್ಟೋಬರ್ 27, 30 ಹಾಗೂ ನವೆಂಬರ್ 03 ರಂದು ಜಿಲ್ಲೆಯ ಶಿಕ್ಷಣ ಸಂಸ್ಥೆಗಳಲ್ಲಿ ನೋಂದಣಿ ಪ್ರಕ್ರಿಯೆ ನಡೆಯಲಿದೆ.
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಈಶಾನ್ಯ ಶಿಕ್ಷಕರ ಕೇತ್ರದ ವ್ಯಾಪ್ತಿಗೊಳಪಡುವ ವಿಭಾಗದ ಎಲ್ಲಾ ಅರ್ಹ ಮತದಾರರ ಪಟ್ಟಿ ಸಿದ್ದಪಡಿಸುವ ವೇಳಾ ಪಟ್ಟಿಯನ್ವಯ ದಿನಾಂಕ: 01.10.2025 ರಿಂದ 06.11.2025 ರವರೆಗೆ ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಅರ್ಹ ಮತದಾರರ ನೋಂದಣಿಗಾಗಿ ಅವಕಾಶ ಕಲ್ಪಿಸಲಾಗಿದೆ.
ಮತದಾರರ ಪಟ್ಟಿಯ ನೋಂದಣಿ ಪ್ರಕ್ರಿಯೆ ತೀವ್ರಗತಿಯಲ್ಲಿ ಚುರುಕುಗೊಳಿಸುವುದು ಅತ್ಯವಶ್ಯಕವಾಗಿದ್ದು, ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರ್ಹ ಮತದಾರರನ್ನು ಗುರುತಿಸಿ ಅವರ ಹೆಸರುಗಳನ್ನು ನೋಂದಾಯಿಸಿ ಯಾವೊಬ್ಬ ಅರ್ಹ ಮತದಾರರು ನೋಂದಣಿ ಪ್ರಕ್ರಿಯೆಯಿಂದ ಹೊರಗುಳಿಯದೆ ನೋಂದಾಯಿಸಬೇಕಾಗಿರುವುದರಿಂದಾಗಿ ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ದಿನಾಂಕ: 27.10.2025, 30.10.2025 ಹಾಗೂ 03.11.2025 ರಂದು ಅರ್ಹ ಮತದಾರರನ್ನು ಮತಪಟ್ಟಿಗೆ ಸೇರ್ಪಡೆಗೊಳಿಸಲು ‘ಮತದಾರರ ವಿಶೇಷ ಮಿಂಚಿನ ನೋಂದಣಿ ಅಭಿಯಾನ’ವನ್ನು ಆಯೋಜಿಸಲಿದ್ದಾರೆ.
ಈ ವಿಶೇಷ ಮಿಂಚಿನ ನೋಂದಣಿ ಅಭಿಯಾನ ಕಾರ್ಯಕ್ರಮಕ್ಕೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


