ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಅಬ್ಬರಿಸುತ್ತಿದ್ದು, ಈ ನಡುವಲ್ಲೇ ಹವಮಾನ ಇಲಾಖೆ ರಾಜ್ಯದ ಜನತೆಗೆ ಸಿಹಿಸುದ್ದಿಯೊಂದನ್ನು ನೀಡಿದೆ.
ಇದೇ ಮೇ 31 ರಂದು ನೈರುತ್ಯ ಮುಂಗಾರು ಮಳೆ ಕೇರಳ ಮೂಲಕ ರಾಜ್ಯ ಪ್ರವೇಶಿಲಿದೆ ಎಂದು ಮಾಹಿತಿ ನೀಡಿದೆ. ಕಳೆದ ವರ್ಷ ಮುಂಗಾರು ಮಳೆ ಕೈಕೊಟ್ಟು ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳು ಭೀಕರ ಬರಗಾಲ ಎದುರಿಸಿದ್ದವು. ಆದರೆ, ಈ ಬಾರಿ ಉತ್ತಮವಾದ ಮುಂಗಾರು ಮಳೆಯಾಗುವ ನಿರೀಕ್ಷೆ ಇದ್ದು, ರಾಜ್ಯ ಜನತೆ ನಿಟ್ಟುಸಿರು ಬಿಟ್ಟಂತಾಗಿದೆ.
ಕೃಷಿ ಆಧಾರಿತ ಭಾರತದ ಆರ್ಥಿಕತೆಗೆ ಜೂನ್, ಜುಲೈ, ಆಗಸ್ಟ್ ಹಾಗೂ ಸೆಪ್ಟಂಬರ್ ತಿಂಗಳುಗಳೇ ನಿರ್ಣಾಯಕ. ಈ ನಾಲ್ಕು ತಿಂಗಳು ಮಳೆಗಾಲಕ್ಕೆ ಉತ್ತಮ ವೇದಿಕೆಯಾಗಿದೆ. ಈ ಬಾರಿ ಆಗಸ್ಟ್ ಮತ್ತು ಸೆಪ್ಟಂಬರ್ ತಿಂಗಳುಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ನಿರೀಕ್ಷೆ ಇದೆ.
ಕರ್ನಾಟಕ ರಾಜ್ಯದ ಕರಾವಳಿ ಭಾಗಕ್ಕೆ ಮುಂಗಾರು ಮಾರುತಗಳು ಜೂನ್ 2 ಅಥವಾ 3ಕ್ಕೆ ಪ್ರವೇಶ ಮಾಡುವ ನೀರಿಕ್ಷೆ ಇದೆ. ಹೀಗಾಗಿ ಹವಾಮಾನ ಇಲಾಖೆ ಅಧಿಕಾರಿಗಳು ಕೂಡ ಮುಂಗಾರು ಮಾರುತಗಳ ಚಲನವಲನ ಪರಿಶೀಲನೆ ಮಾಡಿ, ರೈತರಿಗೆ ಮಾಹಿತಿ ನೀಡುತ್ತಿದ್ದಾರೆ.
ಬೆಂಗಳೂರಿನ ಹವಮಾನ ಇಲಾಖೆಯ ನಿರ್ದೇಶಕ ಎನ್ ಪುವಿಯರಸನ್ ಮಾತನಾಡಿ, ವಿವಿಧ ವ್ಯವಸ್ಥೆಗಳ ಪ್ರಗತಿ ಮತ್ತು ಹೊಸ ವ್ಯವಸ್ಥೆಗಳ ರಚನೆಯೊಂದಿಗೆ, ಮುಂಗಾರು ಪ್ರಾರಂಭವಾಗುವ ಸಾಧ್ಯತೆಯಿದೆ. ಮೇ 30 ರೊಳಗೆ ಕೇರಳ ಮತ್ತು ಮೇ 31 ರ ವೇಳೆಗೆ ಕರ್ನಾಟಕವನ್ನು ಅಪ್ಪಳಿಸುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
2023 ರಲ್ಲಿ, ಜೂನ್ನಿಂದ ಸೆಪ್ಟೆಂಬರ್ವರೆಗೆ 831.8 ಮಿಮೀ ಸಾಮಾನ್ಯ ಮಳೆಗೆ ವಿರುದ್ಧವಾಗಿ ರಾಜ್ಯದಲ್ಲಿ 678.4 ಮಿಮೀ ಮಳೆಯಾಗಿದೆ. ಇದರಿಂದ ಶೇ.18 ರಷ್ಟು ಮಳೆ ಕೊರತೆಯಾಗಿದೆ ಎಂದು ತಿಳಿದುಬಂದಿದೆ.
ಈ ನಡುವೆ ಮೇ 31ರವರೆಗೆ ರಾಜ್ಯದ ಬಹುತೇಕ ಭಾಗಗಳಲ್ಲಿ 40-50 ಕಿಮೀ ವೇಗದಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ. ಗಾಳಿ ವೇಗ 65 ಕಿಮೀ ಇರಲಿದೆ ಎಂದು IMD ಮುನ್ಸೂಚನೆ ನೀಡಿದೆ.
ಈ ನಡುವೆ ಮೇ 26ರಂದು ಸಂಜೆ ರೆಮಲ್ ಚಂಡಮಾರುತ ಬಾಂಗ್ಲಾದೇಶ ಕರಾವಳಿ ಮೂಲಕ ಭಾರತದ ಈಶಾನ್ಯ ರಾಜ್ಯಗಳಿಗೆ ಅಪ್ಪಳಿಸುವ ಸಾಧ್ಯತೆಯಿದೆ ಎಂದೂ ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ವಾಯುಭಾರ ಕುಸಿತದಿಂದ ಚಂಡಮಾರುತ ಈಶಾನ್ಯಕ್ಕೆ ಚಲಿಸುವ ಸಾಧ್ಯತೆಯಿದೆ. ಪೂರ್ವ-ಮಧ್ಯ ಬಂಗಾಳ ಕೊಲ್ಲಿಯಲ್ಲಿ 34-47 ನಾಟ್ (1 KT, ಅಥವಾ ಗಂಟು 1.852 kmph ಗೆ ಸಮನಾಗಿರುತ್ತದೆ) ಜೊತೆಗೆ ಸೈಕ್ಲೋನಿಕ್ ಚಂಡಮಾರುತ ‘Remal’ ಆಗಿ ಮತ್ತಷ್ಟು ತೀವ್ರಗೊಳ್ಳುತ್ತದೆ. ನಂತರ ಉತ್ತರ ಭಾಗಕ್ಕೆ ಚಲಿಸುತ್ತದೆ, ಇಂದು ರಾತ್ರಿ ವೇಳೆಗೆ ಚಂಡಮಾರುತ ತೀವ್ರಗೊಳ್ಳಲಿದೆ (48-63 KT) ಎಂದು ತಿಳಿಸಿದೆ.