ಮಡಿಕೇರಿ,01: ಸುಂದರ ಪ್ರಾಕೃತಿಕ ಸೌಂದರ್ಯದ ಮೂಲಕ ಕೊಡಗು ಪ್ರವಾಸೋದ್ಯಮ ಕ್ಷೇತ್ರದಲ್ಲಿ ವಿಶ್ವದ ಗಮನ ಸೆಳೆದಿದೆ. ಸದ್ಯ ಈ ಪ್ರವಾಸೋದ್ಯಮಕ್ಕೆ ಮತ್ತೊಂದು ಗ್ಲಾಸ್ ಸ್ಕೈ ವಾಕ್ ಬ್ರಿಡ್ಜ್ ಹೊಸ ಸೇರ್ಪಡೆಯಾಗಿದೆ.
ಖಾಸಗಿಯಾಗಿ ಆರಂಭವಾಗಿರುವ ಗ್ಲಾಸ್ ಸ್ಕೈ ವಾಕ್ ಬ್ರಿಡ್ಜ್ ಇಡೀ ದಕ್ಷಿಣ ಭಾರತದ ಗಮನ ಸೆಳೆಯುತ್ತಿದೆ. ಅಚ್ಚ ಹಸಿರ ಬೆಟ್ಟಗುಡ್ಡ ನಡುವಿರುವ ಆ ಗ್ಲಾಸ್ ಬ್ರಿಡ್ಜ್ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.
ಈ ಗ್ಲಾಸ್ ಸ್ಕೈ ವಾಕ್ ಬ್ರಿಡ್ಜ್, ಮಡಿಕೇರಿ ಹೊರವಲಯದ ಅಬ್ಬಿಪಾಲ್ಸ್‌ಗೆ ಹೋಗುವ ರಸ್ತೆಯಲ್ಲಿದೆ. ಮಡಿಕೇರಿ ನಗರದಿಂದ ಸುಮಾರು 5 ಕಿಮೀ ಸಂಚಾರ ಮಾಡಿದರೆ ಅಬ್ಬಿಫಾಲ್ಸ್ ಜಂಕ್ಷನ್ ಬಳಿ ಇರುವ ನಂದಿಮೊಟ್ಟೆ ಎಂಬ ಸ್ಥಳದಲ್ಲಿ ಈ ಅತೀ ದೊಡ್ಡ ಗ್ಲಾಸ್ ಬಿಡ್ಜ್ ಸಿಗುತ್ತದೆ. ಈ ಬ್ರಿಡ್ಜ್ 180 ಮೀಟರ್ ಉದ್ದ, 5 ಮೀಟರ್ ಅಗಲ, 250 ಅಡಿ ಎತ್ತರದಲ್ಲಿರುವ ಈ ಗ್ಲಾಸ್ ಸ್ಕೈ ವಾಕ್ ಬ್ರಿಡ್ಜ್ ಎಲ್ಲರ ಗಮನ ಸೆಳೆಯುತ್ತಿದೆ.
ಕೊಡಗಿನ ಈ ಸ್ವಾಭಾವಿಕ ಪ್ರಕೃತಿಯ ಸೌಂದರ್ಯ ಇಡೀ ವಿಶ್ವದ ಗಮನ ಸೆಳೆದಿದೆ. ಅದರಲ್ಲೂ ಇಲ್ಲಿನ ವೀವ್ ಪಾಯಿಂಟ್‌ಗಳಂತೂ ಮನಮೋಹಕವಾಗಿದೆ. ಅದರ ಸಾಲಿಗೆ ಸದ್ಯ ಬೆಟ್ಟದ ಇಕ್ಕೆಲಗಳ ನಡುವೆ ಇದೀಗ ಖಾಸಗಿಯವರಿಂದ ನಿರ್ಮಾಣವಾಗಿರುವ ಗ್ಲಾಸ್ ಸ್ಕೈ ವಾಕ್ ಬ್ರಿಡ್ಜ್ ಸೇರಿದೆ. ಹಸಿರ ಪ್ರಕೃತಿಯ ನಡುವೆ ಪಾರದರ್ಶಕ ಗಾಜಿನ ಮೇಲೆ ನಡೆಯುವ ರೋಮಾಂಚಕ ಅನುಭವವನ್ನು ಪ್ರವಾಸಿಗರು ಪಡೆದುಕೊಳ್ಳುತ್ತಿದ್ದಾರೆ.
ಸುಮಾರು 15 ಟನ್ ಬಾರ ಹೊರುವ ಸಾಮರ್ಥ್ಯದ ಈ ಬ್ರಿಡ್ಜ್‌ನಲ್ಲಿ ಒಮ್ಮೆಗೆ 30 ರಿಂದ 35 ಮಂದಿ ನಿಂತು ಪ್ರಕೃತಿಯ ಸೌಂದರ್ಯ ಸವಿಯಬಹುದಾಗಿದೆ. ಮಳೆಗಾಲ, ಚಳಿಗಾಲದ ಸಮಯದಲ್ಲಿ ಮೋಡಗಳ ಮರೆಯಲ್ಲಿ ಥ್ರಿಲ್ಲಿಂಗ್ ಅನುಭವ ಪ್ರವಾಸಿಗರಿಗೆ ಸಿಗಲಿದೆ.
ಕೇರಳದ ವಯನಾಡಿನಲ್ಲಿ ಖಾಸಗಿಯಾಗಿ ನಿರ್ಮಾಣವಾಗಿದ್ದ ಗ್ಲಾಸ್ ಸ್ಕೈ ವಾಕ್ ಬ್ರಿಡ್ಜ್ ಬಿಟ್ಟರೆ, ದಕ್ಷಿಣ ಭಾರತದ ದೊಡ್ಡ ಗ್ಲಾಸ್ ಬ್ರಿಡ್ಜ್ ಎನ್ನುವ ಖ್ಯಾತಿ ಗಳಿಸಿದೆ. ಕೊಡಗಿನಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಗರಿಮೆಗೂ ಈ ಬಿಡ್ಜ್ ಪಾತ್ರವಾಗಿದೆ. ಇದು ಪ್ರವಾಸಿಗರನ್ನು ಕೊಡಗಿನತ್ತ ಮತ್ತಷ್ಟೂ ಆಕರ್ಷಿಸುತ್ತಿದೆ.