ಧಾರವಾಡ: ಮಹಿಳೆಯರು ಸ್ವಾವಲಂಬಿಗಳಾದಾಗ ಕುಟುಂಬ, ಸಮಾಜಕ್ಕೆ ಆರ್ಥಿಕ ಶಕ್ತಿ ಹೆಚ್ಚುತ್ತದೆ. ಈ ಹಿನ್ನಲೆಯಲ್ಲಿ ಮಹಿಳೆಯರಿಗಾಗಿ ಕಾಂಗ್ರೇಸ್ ನೇತೃತ್ವದ ಸರಕಾರ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಟಾನಕ್ಕೆ ತಂದಿದೆ ಎಂದು ಮಾಜಿ ಶಾಸಕಿ ಹಾಗೂ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯಾ ರೆಡ್ಡಿ ತಿಳಿಸಿದರು.
ನಗರದ ಮಾರ್ಡನ್ ಹಾಲ್ನಲ್ಲಿ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆಯರಿಗೆ ಕಾಂಗ್ರೆಸ್ ಹೆಚ್ಚು ಪ್ರಾತಿನಿದ್ಯ ನೀಡುತ್ತಲೇ ಬಂದಿದೆ. ಮಹಿಳೆಯರ ಆತ್ಮವಿಶ್ವಾಸ ಹೆಚ್ಚಿಸಲು ಹಲವಾರು ಯೋಜನೆಗಳನ್ನು ಅನುಷ್ಟಾನಕ್ಕೆ ತಂದಿದೆ. ಮಹಿಳೆಯರು ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ನಿರಂತರ ಪ್ರಯತ್ನ ಕಾಂಗ್ರೇಸ್ ಮಾಡುತ್ತಿದೆ ಎಂದರು.
ಮಹಿಳಾ ಶಕ್ತಿಯೇ ದೇಶದ ಶಕ್ತಿ. ಮಹಿಳೆಯರು ಆರೋಗ್ಯದ ಕಡೆ ಹೆಚ್ಚಾಗಿ ಗಮನಹರಿಸಬೇಕು. ಗ್ಯಾರಂಟಿ ಯೋಜನೆಯಿಂದ ಮಹಿಳೆಯರು ರಾಜ್ಯದಾದ್ಯಂತ ಓಡಾಡುವ ಅವಕಾಶ ಸಿಕ್ಕಿದೆ. ಕುಟುಂಬ ನಿರ್ವಹಣೆಗೆ ೨ ಸಾವಿರ ನೀಡುತ್ತಿದೆ. ಜೊತೆಗೆ ಅನ್ನಭಾಗ್ಯ ನೀಡುತ್ತಿದೆ ಎಂದು ತಿಳಿಸಿದರು.
ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ರಾಜ್ಯ ಸರಕಾರದಿಂದ ಐದು ಗ್ಯಾರಂಟಿ ಯೋಜನೆಗಳನ್ನು ಟೀಕೆ ಮಾಡುವ ಬಿಜೆಪಿ ಇದೇ ಯೋಜನೆಗಳನ್ನು ಕಾಪಿ ಮಾಡಿ ತಾನು ಅಧಿಕಾರದಲ್ಲಿ ಇರುವ ರಾಜ್ಯಗಳಲ್ಲಿ ಅನುಷ್ಟಾನಕ್ಕೆ ತಂದಿದೆ. ಅದಕ್ಕೆ ಮೋದಿ ಗ್ಯಾರಂಟಿ ಎಂದು ಹೇಳುತ್ತಾ ಪ್ರಚಾರ ಮಾಡುತ್ತಿದೆ ಎಂದು ವ್ಯಂಗ್ಯವಾಡಿದರು.
ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಗೌರಮ್ಮ ಬಲೋಗಿ ಮಾತನಾಡಿ, ಕಾಂಗ್ರೇಸ್ ಪಕ್ಷ ಸಂಘಟಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಎಲ್ಲರ ಸಹಕಾರ ಪ್ರೀತಿ ವಿಶ್ವಾಸಕ್ಕೆ ನಾನು ಚಿರಋಣಿ ಎಂದರು.
ಕಾರ್ಯಕ್ರಮದಲ್ಲಿ ಕಾಂಗ್ರೇಸ್ ಮುಖಂಡರಾದ. ಶಾಸಕ ಪ್ರಸಾದ್ ಅಬ್ಬಯ್ಯ ದೀಪಕ್ ಚಿಂಚೋರೆ, ಅಲ್ತಾಪ ಹಳ್ಳೂರ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಗೌರಮ್ಮ ಬಲೋಗಿ, ರಜತ ಉಳ್ಳಾಗಡ್ಡಿ. ರಾಜಶೇಖರ ಮೆಣಸಿನಕಾಯಿ. ದೇವಕಿ ಯೋಗಾನಂದ, ಸ್ವಾತಿ ಮಾಳಗಿ, ರವಿ ಮಾಳಗೇರ ಸೇರಿದಂತೆ ಇತರರಿದ್ದರು.


