ನವದೆಹಲಿ: ಈದ್ ಹಬ್ಬಕ್ಕೆ ಮುಂಚಿತವಾಗಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಅಲ್ಪಸಂಖ್ಯಾತ ಮೋರ್ಚಾ “ಸೌಗಾತ್-ಎ-ಮೋದಿ” ಅಭಿಯಾನವನ್ನು ಪ್ರಾರಂಭಿಸಲಿದೆ. ಈ ಅಭಿಯಾನದ ಅಂಗವಾಗಿ ದೇಶಾದ್ಯಂತದ 32 ಲಕ್ಷ ದೀನದಲಿತ ಮುಸ್ಲಿಮರಿಗೆ ವಿಶೇಷ ಕಿಟ್ಗಳನ್ನು ಬಿಜೆಪಿ ವಿತರಿಸಲಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಮಾರ್ಗದರ್ಶನದಲ್ಲಿ ಮಂಗಳವಾರ ದೆಹಲಿಯ ನಿಜಾಮುದ್ದೀನ್ನಿಂದ ಅಭಿಯಾನ ಪ್ರಾರಂಭವಾಗಿದೆ. ಬಡ ಮುಸ್ಲಿಂ ಕುಟುಂಬಗಳು ಕೂಡ ಯಾವುದೇ ಸಮಸ್ಯೆ ಇಲ್ಲದೆ ಹಬ್ಬವನ್ನು ಆಚರಿಸಲಿ ಎಂಬ ಉದ್ದೇಶದಿಂದ ಅವರಿಗೆ ಕಿಟ್ಗಳನ್ನು ನೀಡಲಾಗುತ್ತಿದೆ. ಅಭಿಯಾನದ ಭಾಗವಾಗಿ, 32,000 ಅಲ್ಪಸಂಖ್ಯಾತ ಮೋರ್ಚಾ ಕಾರ್ಯಕರ್ತರು ದೇಶಾದ್ಯಂತ 32,000 ಮಸೀದಿಗಳ ಸಹಕಾರದೊಂದಿಗೆ ಕೆಲಸ ಮಾಡಲಿದ್ದಾರೆ.
ಅಭಿಯಾನದ ವಿಶಾಲ ದೃಷ್ಟಿಕೋನವನ್ನು ವಿವರಿಸಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಜಮಾಲ್ ಸಿದ್ದಿಕಿ, “ಪವಿತ್ರ ರಂಜಾನ್ ತಿಂಗಳು ಮತ್ತು ಮುಂಬರುವ ಈದ್, ಗುಡ್ ಫ್ರೈಡೆ, ಈಸ್ಟರ್, ನವರೋಜ್ ಮತ್ತು ಭಾರತೀಯ ಹೊಸ ವರ್ಷದಂಥ ಸಂದರ್ಭಗಳಲ್ಲಿ ಅಲ್ಪಸಂಖ್ಯಾತ ಮೋರ್ಚಾ “ಸೌಗಾತ್-ಎ-ಮೋದಿ” ಅಭಿಯಾನದ ಮೂಲಕ ಅಗತ್ಯವಿರುವ ಜನರಿಗೆ ಸಹಾಯ ಒದಗಿಸಲಿದೆ” ಎಂದು ಹೇಳಿದರು. ಇದಲ್ಲದೆ ಜಿಲ್ಲಾ ಮಟ್ಟದಲ್ಲಿ ಈದ್ ಮಿಲನ್ ಆಚರಣೆಯನ್ನು ಆಯೋಜಿಸಲಾಗುವುದು ಎಂದು ಅವರು ತಿಳಿಸಿದರು.